ಜಿಲ್ಲೆ

ಕಳೆಗಟ್ಟಿದೆ ಬಸವನಗುಡಿ ಕಡಲೆಕಾಯಿ ಪರಿಷೆ: ಭಕ್ತರಿಗೆ ಕಡಲೆಕಾಯಿ ಪ್ರಸಾದ, ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ

arunakunigal

ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ನ.20ರ ಸಂಜೆ 6ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಇದಕ್ಕೂ ಮುನ್ನವೇ ಪರಿಷೆ ಕಳೆಗಟ್ಟಿದೆ. ಬಸವನಗಡಿಯ ದೊಡ್ಡಗಣಪತಿ ಹಾಗೂ ದೊಡ್ಡಬಸವಣ್ಣನ ದೇವಾಲಯಗಳನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿದ್ದು, ಸಾವಿರಾರು ಮಂದಿ ಪರಿಷೆಗೆ ಆಗಮಿಸುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ವ್ಯಾಪಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಪರಿಷೆಯನ್ನು ನ.20ರ 6ಕ್ಕೆ ಸಿಎಂ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್​, ರಾಜೀವ್​ ಚಂದ್ರಶೇಖರ್​, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಮಣ್ಯ, ಉದಯ ಗರುಡಾಚಾರ್​ ಮೊದಲಾದವರು ಭಾಗವಹಿಸಲಿದ್ದಾರೆ.

ತೆಪ್ಪೋತ್ಸವ ಆಕರ್ಷಣೆ: ಪರಿಷೆಯ ಹಿಂದಿನ ಸಂಪ್ರದಾಯಗಳನ್ನು ಮರುಕಳಿಸಲು ಹಾಗೂ ನಗರದ ಜನರಿಗೆ ಗ್ರಾಮೀಣ ಸೊಗಡಿನ ಆಚರಣೆ ಪರಿಚಯಿಸಲು ಈ ಬಾರಿ ನ.21ರಂದು ಸಂಜೆ 6ಕ್ಕೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಈ ಹಿಂದೆ (2008-09) ಯಡಿಯೂರು ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು. ನಂತರ ನಾನಾ ಕಾರಣಗಳಿಂದ ಸ್ಥಗಿತಗೊಂಡಿತ್ತು. ಈ ವರ್ಷ ಹೆಚ್ಚು ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಕೆಂಪಾಂಬುಧಿ ಕೆರೆಯಲ್ಲಿ ನೀರು ತುಂಬಿದ್ದು, ಅಲ್ಲಿಯೇ ತೆಪ್ಪೋತ್ಸವ ನಡೆಸಲಾಗುತ್ತಿದೆ. ಈ ವೇಳೆ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿವೆ. ಕಹಳೆಬಂಡೆ ಉದ್ಯಾನದಲ್ಲಿ ನ.20,21 ಹಾಗೂ 22ರಂದು ಸಂಜೆ 6ರಿಂದ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ನ.21 ಮತ್ತು 22ರಂದು ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಡಲೆಕಾಯಿ ಪ್ರಸಾದ: ಪ್ರತಿ ವರ್ಷ ಕಾರ್ತಿಕ ಮಾಸದ ಕೊನೇ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಹೀಗಾಗಿ ನ.21ರಂದು ಬೆಳಗ್ಗೆ ದೊಡ್ಡಬಸವಣ್ಣನಿಗೆ ಹಾಗೂ ದೊಡ್ಡಗಣಪತಿ ದೇವರಿಗೆ ಕಡಲೆಕಾಯಿಯಿಂದ ಅಭಿಷೇಕ ಮಾಡಲಾಗುವುದು. ಬೆಣ್ಣೆ ಹಾಗೂ ಕಡಲೆಕಾಯಿ ಬೀಜದ ಅಲಂಕಾರ ಮಾಡಲಾಗುವುದು. ಮೇಲಿನ ದೊಡ್ಡ ಬಸಣ್ಣನಿಗೆ ಕಡಲೆಕಾಯಿ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಗುತ್ತದೆ. ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ ದೊರೆಯುತ್ತದೆ. ಪರಿಷೆಗೆ ಬರುವ ಭಕ್ತರಿಗೆ ಕಡಲೆಕಾಯಿಯನ್ನೇ ಪ್ರಸಾದವನ್ನಾಗಿ ನೀಡಲಾಗುವುದು ಎನ್ನುತ್ತಾರೆ ದೇವಾಲಯದ ಅರ್ಚಕರು.

ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಸೇರಿ ಚಿಂತಾಮಣಿ, ಕೋಲಾರ, ಮಾಲೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಹೊಸಕೋಟೆ ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿ ಮೂಟೆಗಳೊಂದಿಗೆ ಈಗಾಗಲೇ ಬಿಡಾರ ಹೂಡಿದ್ದು, ನಾನಾ ತಳಿಯ ರಾಶಿರಾಶಿ ಕಡಲೆಕಾಯಿ ಗ್ರಾಹಕರನ್ನು ಸೆಳೆಯುತ್ತಿವೆ. ನಾನಾ ತಳಿಯ ಹಾಗೂ ನಾನಾ ಗಾತ್ರದ ಹಸಿ, ಹುರಿದ, ಬೇಯಿಸಿದ, ಅರೆಬೆಂದ ಕಡಲೆಕಾಯಿಗಳು ಮಾರಾಟವಾಗುತ್ತಿವೆ. ಒಂದು ಬೀಜದ, ಎರಡು ಬೀಜದ, 4-5 ಬೀಜದ ತರಹೇವಾರಿ ಕಡಲೆಕಾಯಿಗಳು ಲೀಟರ್​ಗೆ 40-70 ರೂ.ವರೆಗೂ ಮಾರಾಟವಾಗುತ್ತಿವೆ.

ಹಾಕಿದ ಬಂಡವಾಳ ತೆಗೆದರೆ ಸಾಕು: ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಕೆಲವೆಡೆ ಸೇಂಗಾ ಬೆಳೆ ನಾಶವಾಗಿದೆ, ಉಳಿದೆಡೆ ಅವಧಿಗೂ ಮುನ್ನವೇ (ದಸರಾದಲ್ಲೇ) ಬೆಳೆ ಬಂದಿದೆ. ಹಾಗಾಗಿ ಪರಿಷೆಯಲ್ಲಿ ಹಸಿ ಕಡಲೆಕಾಯಿ ಪೂರೈಕೆ ಕಡಿಮೆ ಇದ್ದು ಬೆಲೆಯೂ ಹೆಚ್ಚಿದೆ. ಕಳೆದ ವರ್ಷ ಪ್ರತಿ ಕೆ.ಜಿ.ಗೆ 30&60 ರೂ. ಇದ್ದ ಕಡಲೆಕಾಯಿ ಈ ವರ್ಷ ಕೆ.ಜಿ. 60-80 ರೂ. ಆಗಿದೆ. ಕಡಲೆಕಾಯಿ ಹುರಿಯಲು ಮೂಟೆಗೆ 500 ರೂ. ಕೂಲಿ ಕೊಡಬೇಕು. ಇದರಿಂದ ಹುರಿದ ಕಡಲೆಕಾಯಿ ಲೀಟರ್​ಗೆ 60-80 ರೂ. ಆಗಿದೆ. ಪರಿಷೆಯಲ್ಲಿ ಬೆಲೆ ಹೆಚ್ಚಿರುವುದರಿಂದ ಲಾಭ ಗಳಿಸುವುದಿರಲಿ, ಹಾಕಿದ ಬಂಡವಾಳ ತೆಗೆದರೆ ಸಾಕು ಎನ್ನುತ್ತಿದ್ದಾರೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.\