ಜಿಲ್ಲೆ

9ಕ್ಕೆ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಘಟಕದ ಉದ್ಘಾಟನೆ

ಬಸವನಬಾಗೇವಾಡಿ: ರಾಜ್ಯಾದ್ಯಂತ ಕಾರ್ಯಪ್ರವೃತ್ತವಾಗಿ ಕ್ರಿಯಾಶೀಲವಾಗಿ ಜಾಗೃತಿ ಕಾರ್ಯಕ್ಕೆ ತೊಡಗಿಸಿಕೊಂಡ ವಿಜಯಪುರ ಜಿಲ್ಲಾ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭ ಫೆ. 9ರಂದು ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಸಂಸ್ಥಾನದ ಹಿರೇಮಠದಲ್ಲಿ ನಡೆಯಲಿದೆ ಎಂದು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ನಿಯೋಜಿತ ಜಿಲ್ಲಾಧ್ಯಕ್ಷೆ ಗಿರಿಜಾ ಪಾಟೀಲ ಹೇಳಿದರು.

ಹಳ್ಳಿ ಮಕ್ಕಳು ಬಂಗಾರದ ಚುಕ್ಕೆಗಳು, ಪುಸ್ತಕದ ಜೋಳಿಗೆಗೆ ಅಕ್ಷರದ ಕಾಳುಗಳು, ಶಾಲೆಗಾಗಿ ನಾವು-ನೀವು, ಶರಣ ಸಾಹಿತ್ಯದೊಂದಿಗೆ ಸೃಜನಶೀಲ ಬಳಗ, ಸೃಜನ ಬಳಗ ನಡೆಗೆ ವಿದ್ಯಾರ್ಥಿಗಳ ಕಡೆಗೆ, ಪುಸ್ತಕ ಪಲ್ಲಕ್ಕಿ, ಪುಸ್ತಕ ಕುಂಭ, ವೀರಯೋಧರು ಹಾಗೂ ಅನ್ನದಾತರು ಕುರಿತು ಚಿಂತನ ಮಂಥನ, ಮತ್ತೆ ಮಕ್ಕಳಾಗೋಣ, ಸಾಹಿತಿಗಳ ಬದುಕು ಬರಹ ಸೇರಿ ಯೋಜನೆಗಳನ್ನಿಟ್ಟುಕೊಂಡು ಮಕ್ಕಳಲ್ಲಿ ಸಾಹಿತ್ಯಾಭಿಮಾನ ಬೆಳೆಯಲಿ ಹಾಗೂ ಮಕ್ಕಳಿಂದಲೇ ಸಾಹಿತ್ಯ ಬೆಳೆಸುವುದು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ಯೋಜನೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕವಾಗಿದ್ದು, ಅಧಿಕೃತವಾಗಿ ಫೆ. 9ರಂದು ಜಿಲ್ಲಾ ಘಟಕಕ್ಕೆ ಚಾಲನೆ ನೀಡಲಾಗುವುದು. ಇದೇ ವೇಳೆ ಪುಸ್ತಕ ಪಲ್ಲಕ್ಕಿ ಮೆರವಣಿಗೆ ಹಾಗೂ ರಾಜ್ಯಮಟ್ಟದ ಶತಕವಿಗಳ ಗೋಷ್ಠಿ ನಡೆಯಲಿದ್ದು, ಮುಂಬರುವ ದಿನಗಳಲ್ಲಿ ತಾಲೂಕು ಘಟಕಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ವಿರೇಶ ಗೂಡ್ಲಮನಿ ಮಾತನಾಡಿ, ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗವು ನೆರೆಯ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಈಗಾಗಲೇ 160ಕ್ಕೂ ಅಧಿಕ ಪುಸ್ತಕಗಳನ್ನು ಹೊರ ತಂದಿದೆ. ಶೀಘ್ರ ರಾಜ್ಯದ ಎಲ್ಲ ತಾಲೂಕು ಘಟಕಗಳನ್ನು ರಚಿಸುವ ಯೋಜನೆ ಬಳಗ ಹೊಂದಿದೆ ಎಂದರು.

ಜಿಲ್ಲಾ ಘಟಕದ ಕೋಶಾಧ್ಯಕ್ಷೆ ಅನೂಜಾ ಗುಬ್ಬಾ, ಜಿಲ್ಲಾ ಸಂಚಾಲಕಿ ಚಾಂದಬಿ ಬಿಜಾಪುರ, ಜಿಲ್ಲಾ ಸಂಘಟಕ ಬಸವರಾಜ ಹಡಪದ, ಜಿಲ್ಲಾ ಕಾರ್ಯದರ್ಶಿ ಆರುಂಧತಿ ಹತ್ತಿಕಾಳ, ಜಿಲ್ಲಾ ಸಂಚಾಲಕ ಭೀಮನಗೌಡ ಡಿಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಗಂಗಲ್ಲ, ಸಂತೋಷ ಪಾಟೀಲ ಮತ್ತಿತರರಿದ್ದರು.