ಜಿಲ್ಲೆ

ಧರ್ಮ ವೈಭವೀಕರಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ...

ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀ ಅನಿಸಿಕೆ

ಉಡುಪಿಯಲ್ಲಿ 'ಸಾಮರಸ್ಯ' ಪ್ರಶಸ್ತಿ ಸ್ವೀಕಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಎಲ್ಲರೂ ಅಭಿವ್ಯಕ್ತಿ ಮತ್ತು ವಾಕ್​ ಸ್ವಾತಂತ್ರ್ಯ ಹೊಂದಿದ್ದೇವೆ. ಆದರೆ, ಈ ಹಕ್ಕನ್ನು ದುಷ್ಕೃತ್ಯ, ದುರ್ವರ್ತನೆಗೆ ಬಳಸಿಕೊಳ್ಳಲಾಗುತ್ತಿದೆ. ಯಾವುದನ್ನು ಪ್ರಶ್ನಿಸಬೇಕೋ ಅದನ್ನು ಬಿಟ್ಟು ಬೇಡವಾದ ಸಂಗತಿಯನ್ನು ಪ್ರಶ್ನಿಸುವುದು ನಡೆದಿದೆ. ಧರ್ಮ ವೈಭವೀಕರಿಸಿದರೆ, ರಾಜಕೀಯ ಗಟ್ಟಿಯಾದರೆ ಸಾಮರಸ್ಯ ನಶಿಸಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ನುಡಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಮೋಘ (ರಿ.) ಉಡುಪಿಯ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಸಂಸ್ಥೆ ವತಿಯಿಂದ ಮೇ 24ರಂದು ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮರಸ್ಯ ಪ್ರಶಸ್ತಿ ಸ್ವೀಕರಿಸಿ ಆಶೀರ್ವಚನ ನೀಡಿದರು.

ಆಚರಣೆಗಳೆಲ್ಲ ಮನೆಯಲ್ಲಿರಲಿ

ನಮ್ಮ ಸಂಸ್ಕಾರ, ಆಚರಣೆ, ಸಂಸ್ಕೃತಿ, ಧರ್ಮ, ಜಾತಿ ಎಲ್ಲವೂ ಸಹ ಮನೆಯೊಳಗೇ ಇರಲಿ. ಮನೆಯಿಂದ ಹೊರಬಂದ ಬಳಿಕ ನಾವೆಲ್ಲ ಒಂದೇ ಎಂಬ ಸಮರಸ ಭಾವ ಆಚರಣೆಯಲ್ಲಿರಲಿ. ಎಲ್ಲರೂ ಕೈಜೋಡಿಸಿದರೆ ಭವಿಷ್ಯದ ಭಾರತದಲ್ಲಿ ಸಾಮರಸ್ಯ ಮೂಡಿಸಬಹುದು. ಇದಕ್ಕೆ ಪ್ರಥಮ ಹೆಜ್ಜೆಯಾಗಿ ಯುವ ಪೀಳಿಗೆಯಲ್ಲಿ ಸಾಮರಸ್ಯದ ಭಾವ ಮೂಡುವಂತಹ ವಾತಾವರಣ ನಿರ್ಮಾಣನವಾಗಬೇಕು. ಇಲ್ಲದಿದ್ದಲ್ಲಿ ವಿಶ್ವಕ್ಕೆ ಮಾದರಿಯಾದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಾಡಬಹುದು ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಎರಡು ಪುಸ್ತಕ ಬಿಡುಗಡೆ

ಲೇಖಕಿ ಪೂರ್ಣಿಮಾ ಸುರೇಶ ವಿರಚಿತ ಸಂತೆಯೊಳಗಿನ ಏಕಾಂತ ಮತ್ತು ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ ಅವರು ಇಂಗ್ಲಿಷ್​ಗೆ ಭಾಷಾಂತರಿಸಿದ ದಿ ಅಕ್ವೇರಿಯಂ ಪುಸ್ತಕ ಬಿಡುಗಡೆ ಮಾಡಲಾಯಿತು. ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅವರು ಕೃತಿಗಳ ಕುರಿತು ಮಾತನಾಡಿದರು.

ಖ್ಯಾತ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್​ ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಕಾರ್ಯಕರ್ತ ವಾದಿರಾಜ ಅವರು ಶ್ರೀಗಳ ಸಮಾಜಮುಖಿ ಕಾರ್ಯದ ಕುರಿತು ಮಾತನಾಡಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಹಿರಿಯ ಲೇಖಕಿ ಪಾರ್ವತಿ ಜಿ. ಐತಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪಾಲ್ಗೊಂಡಿದ್ದರು.

ಗಣೇಶ ಗಂಗೊಳ್ಳಿ ವಂದೇ ಮಾತರಂ ದೇಶಭಕ್ತಿ ಗೀತೆ ಹಾಡಿದರು. ಸಂಸ್ಥೆಯ ಸಂಚಾಲಕ ಸುರೇಶ ನಾಯಕ ಕುಯಿಲಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಮಿತಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಸತ್ಯಾನಂದ ನಾಯಕ ವಂದಿಸಿದರು.

ಅಂಬೇಡ್ಕರ್​ ಅವರೂ ಮತಾಂತರ ಆಗುತ್ತಿರಲಿಲ್ಲ!

ಪೇಜಾವರ ಮಠದ ಕೀರ್ತಿಶೇಷ ವಿಶ್ವೇಶ ತೀರ್ಥ ಶ್ರೀಪಾದರು ಸಾಮರಸ್ಯದ ಮೂಲ ಗುರು. ಅವರ ದಲಿತಕೇರಿ ವಾಸ್ತವ್ಯದಿಂದ ಪ್ರಭಾವಿತರಾಗಿ ಅದೆಷ್ಟೋ ಹಿಂದು ಧಮೀರ್ಯರು ಅನ್ಯ ಧರ್ಮಕ್ಕೆ ಮತಾಂತರ ಆಗುವುದು ತಪ್ಪಿದೆ. ಡಾ. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು ಬೌಧ್ಧ ಧರ್ಮಕ್ಕೆ ಮತಾಂತರ ಆಗುವಾಗ ಪೇಜಾವರ ಶ್ರೀಗಳು ಚಿಕ್ಕವರಾಗಿದ್ದರು. ಅವರ ಪ್ರಭಾವ ಆಗಷ್ಟೇ ಹೊರಬರುತಿತ್ತು. ಅವರೇನಾದರೂ ಆ ಹೊತ್ತಿನಲ್ಲಿ ಸಾಮರಸ್ಯ ಜಾಗೃತಿ ಮೂಡಿಸಿದ್ದರೆ ಅಂಬೇಡ್ಕರ್​ ಅವರೂ ಸಹ ಮತಾಂತರ ಆಗುತ್ತಿರಲಿಲ್ಲ. ಅಂತಹ ಶಕ್ತಿ ಶ್ರೀಗಳಲ್ಲಿತ್ತು. ನನಗೆ ಇಂದು ಲಭಿಸಿದ ಸಾಮರಸ್ಯ ಪ್ರಶಸ್ತಿಯು ಪೇಜಾವರ ಶ್ರೀಗಳಿಗೇ ಸಲ್ಲುತ್ತದೆ ಎಂದು ಬಸವಮೂರ್ತಿ ಸ್ವಾಮೀಜಿ ತಿಳಿಸಿದರು.