ಬಸವಕಲ್ಯಾಣ: ಮನುಷ್ಯ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಮಾಡುವ ದಾನ ಮಹತ್ವದ್ದು ಎಂದು ಸಂಸ್ಥಾನ ಗವಿಮಠದ ಪೀಠಾಧಿಪತಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಶ್ರಾವಣಮಾಸ ನಿಮಿತ್ತ ಸಂಸ್ಥಾನ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲೂಕು ಘಟಕದ ಸಹಯೋಗದಲ್ಲಿ ಸಂಸ್ಥಾನ ಗವಿಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ೫ನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಶ್ರೀಗಳು, ಸೋಪಾದಿಕ ದಾನ, ನಿರುಪಾದಿಕ ದಾನ ಮತ್ತು ಸಹಜದಾನ ಎಂಬ ಮೂರು ಪ್ರಕಾರದ ದಾನಗಳಲ್ಲಿ ಸಹಜದಾನವು ನಿಷ್ಕಾಮದಾನವಾಗಿದ್ದು, ಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕ ಭಗವತ್ಪಾದರು ಈ ದಾನದ ಮಹತ್ವವನ್ನು ಬೋಧಿಸಿದ್ದಾರೆ. ಹಾಗೆಯೇ ಬಸವಣ್ಣನವರೂ ತಮ್ಮ ವಚನದಲ್ಲಿ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ಎನ್ನುತ್ತ ನೀಡುವ ನಿಜಗುಣ ಉಳ್ಳ ದಾನಿಗೆ ಕೂಡಲ ಸಂಗಮನಾಥ ಒಲಿವನು ಎಂದು ಹೇಳಿದ್ದಾರೆ ಎಂದರು.
ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ ಮಾತನಾಡಿ, ಶ್ರಾವಣದ ನಿಮಿತ್ತ ಪ್ರತಿವರ್ಷ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ. ಇಂತ ಕಾರ್ಯಕ್ರಮಗಳು ಮನಸ್ಸು ಶುದ್ಧಗೊಳಿಸಲು ಸಹಕಾರಿಯಾಗುತ್ತವೆ. ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆ, ಶುದ್ಧತೆಗೆ ಆದ್ಯತೆ ನೀಡಬೇಕು. ಶುದ್ಧವಾದ ಗಾಳಿ, ನೀರು, ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ನಾರಾಯಣಪುರ ವಲಯ ಕಸಾಪ ಅಧ್ಯಕ್ಷ ಗೋವಿಂದರೆಡ್ಡಿ ಕೋತಪಲ್ಲೆ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಸ್ವಾಮಿ, ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ದಯಾನಂದ ಶೀಲವಂತ, ಮಲ್ಲಿಕಾರ್ಜುನ ಹೊಳಕುಂದೆ, ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಶೀಲವಂತ, ಸುರೇಖಾ ಶೀಲವಂತ, ಗಂಗಮ್ಮ ಮಠಪತಿ, ಸಂಗೀತಾ ಬಿರಾದಾರ, ವನಿತಾ ಬಿರಾದಾರ, ಪೂರ್ಣಿಮಾ ಸ್ವಾಮಿ, ಶಕುಂತಲಾ ಮಠ ಇದ್ದರು.
ಶರಣಬಸಪ್ಪ ಅಲಗುಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ ನಿರೂಪಣೆ ಮಾಡಿದರು. ಪ್ರೊ.ರುದ್ರೇಶ್ವರ ಗೋರ್ಟಾ ಪ್ರಾರ್ಥನಾ ಗೀತೆ ಹಾಡಿದರು.