ಬಸವಕಲ್ಯಾಣ: ಸಂಸ್ಥಾನ ಗವಿಮಠದ ಪೀಠಾಧಿಪತಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮದಿನ, ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ನಗರದಲ್ಲಿ ಬುಧವಾರ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಮೊಬೈಲ್ ಜಾಗೃತಿ ಅಭಿಯಾನ ನಡೆಯಿತು.
ಶ್ರೀ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ತ್ರಿಪುರಾಂತದ ಶ್ರೀ ಮಡಿವಾಳ ಮಾಚಿದೇವರ ವೃತ್ತದವರೆಗೆ ನಡೆದ ಅಭಿಯಾನದಲ್ಲಿ ಮೊಬೈಲ್‌ನಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಫಲಕಗಳೊಂದಿಗೆ ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ ಪುಸ್ತಕ ಕೊಡಿ, ಮೊಬೈಲ್ ದೂರವಿಡಿ ಎಂಬ ಘೋಷವಾಕ್ಯಗಳ ಮೂಲಕ ಜನಪ್ರತಿನಿಧಿಗಳು, ಗಣ್ಯರು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.
ಪ್ರಮುಖ ವೃತ್ತಗಳಲ್ಲಿ ಪ್ರಮುಖರು ಮಾತನಾಡಿ, ಮೊಬೈಲ್ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಮೊಬೈಲ್ ಬಳಕೆಯಿಂದಾಗಿ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಲು ಗವಿಮಠದ ಪೂಜ್ಯರು ತಮ್ಮ ಜನ್ಮದಿನ ನಿಮಿತ್ತ ಪಾದಯಾತ್ರೆ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನ ಬಳಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳ ಕೈಗೆ ಮೊಬೈಲ್ ಕೊಡಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜನ್ಮದಿನ ನಿಮಿತ್ತ ಆಯೋಜಿಸಿದ ಸಮಾಜಮುಖಿ ಜಾಗೃತಿ ಕಾರ್ಯಕಮಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು.
ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಮುಖಂಡ ಶಾಂತಪ್ಪ ಜಿ.ಪಾಟೀಲ್, ಸಿಪಿಐ ಅಲಿಸಾಬ್, ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೆಗಾಂವ, ಯುವ ಮುಖಂಡ ಶಿವಕುಮಾರ ಬಿರಾದಾರ, ಬಜರಂಗ ದಳ ತಾಲೂಕು ಸಂಯೋಜಕ ರವಿ ನಾವದಗೇಕರ್ ಮಾತನಾಡಿದರು.
ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ತಾಲೂಕು ಅಧ್ಯಕ್ಷ ಬಸವಂತಪ್ಪ ಲವಾರೆ, ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಶ್ರೀಶೈಲ ವಾತಡೆ, ಪ್ರಾಚಾರ್ಯ ಎ.ಜಿ.ಪಾಟೀಲ್, ಪ್ರಮುಖರಾದ ಅರ್ಜುನ ಕನಕ, ಲೋಕೇಶ ಮೋಳಕೆರೆ, ವಿನೋದ ಬಡಗೇಕರ, ರಮೇಶ ರಾಜೋಳೆ, ಪ್ರೊ.ರುದ್ರೇಶ್ವರ ಸ್ವಾಮಿ, ಇಕ್ರಾಮೋದ್ದಿನ್ ಖಾದಿವಾಲಾ, ಮನ್ಸೂರಲಿ, ಅನೀಲ ಶಾಸ್ತ್ರಿ, ಚನ್ನವೀರ ಜಮಾದಾರ, ಬಸವರಾಜ ಬಿರಾದಾರ, ಬಸವಂತಪ್ಪ ಮಾಲಿಪಾಟೀಲ್, ಮರೆಪ್ಪ ಪೊಲೀಸ್ ಪಾಟೀಲ್, ಶ್ರೀನಿವಾಸ ಬಿರಾದಾರ, ಸಚಿನ್ ಗರುಡಕರ, ಸಚಿನ್ ಸೂರ್ಯವಂಶಿ, ಅಜಯ ಗೌಳಿ, ಲೋಕೇಶ ಜಮಖಂಡಿ, ಗುರು ದೇಗಾಂವ, ಲಕ್ಷ್ಮೀಕಾಂತ ಜಾಂತೆ ಪಾಲ್ಗೊಂಡಿದ್ದರು.
ನಾಡಿನ ಭವಿಷ್ಯವಾಗಿರುವ ಮಕ್ಕಳು ಪಾಟಿ-ಪೆನ್ಸಿಲ್ ಹಿಡಿಯುವ ವಯಸ್ಸಿನಲ್ಲಿ ಮೊಬೈಲ್ ಹಿಡಿಯುತ್ತಿದ್ದಾರೆ. ಮಕ್ಕಳ ಮೊಬೈಲ್ ಗೀಳು ಬಿಡಿಸಿ ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಗವಿಮಠದ ಪೂಜ್ಯರು ಜನ್ಮದಿನ ನಿಮಿತ್ತ ಬೀದಿಗಿಳಿದು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಿದ್ದಾರೆ. ಹಿಂದೆಯೂ ಆರೋಗ್ಯಪೂರ್ಣ ಸಮಾಜಕ್ಕಾಗಿ ಗುಟ್ಖಾ, ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಶ್ರೀಗಳ ಸಂದೇಶ ಎಲ್ಲೆಡೆ ತಲುಪಲಿ, ಅವರ ಆಶಯ ಸಾಕಾರಗೊಳ್ಳಲಿ.
| ಶರಣು ಸಲಗರ ಬಸವಕಲ್ಯಾಣ ಶಾಸಕ
ಜಿದ್ದು ಮಾಡುವ ಮಕ್ಕಳಿಗೆ ತಂದೆ-ತಾಯಿಯೇ ಮೊಬೈಲ್ ಗೇಮ್ ಹಚ್ಚಿಕೊಟ್ಟು ಊಟ ಮಾಡಿಸುವುದನ್ನು ನೋಡುತ್ತಿದ್ದೇವೆ. ಮೊಬೈಲ್‌ನಿಂದ ಕಣ್ಣು ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮೊಬೈಲ್ ನೋಡಿ ಮಲಗಿದರೆ ನಿದ್ದೆ, ನೆಮ್ಮದಿ ಹಾಳಾಗುತ್ತಿದೆ. ಹೀಗಾಗಿ ಜನ್ಮದಿನ ನಿಮಿತ್ತ ಶ್ರೀಗಳು ಮೊಬೈಲ್ ಕುರಿತು ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯ ಮಾಡಿದ್ದಾರೆ.
| ಡಾ.ಸಿದ್ದಲಿಂಗಪ್ಪ ಪಾಟೀಲ್ ಹುಮನಾಬಾದ್ ಶಾಸಕ