ಬಸವಕಲ್ಯಾಣ: ಬಸವ ಧರ್ಮ ಪೀಠ ಬಸವ ಮಹಾಮನೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ಜರುಗಲಿರುವ ೨೩ನೇ ಕಲ್ಯಾಣ ಪರ್ವಕ್ಕಾಗಿ ಜಗದ್ಗುರು ಮಾತೆ ಗಂಗಾದೇವಿ ಅವರ ಸಾನ್ನಿಧ್ಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಗದ್ಗುರು ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಬಸವಾದಿ ಶರಣರ ತತ್ವ ಸಿದ್ದಾಂತಗಳು ಜಗತ್ತಿಗೆ ಪಸರಿಸಬೇಕು ಎನ್ನುವ ಆಶಯದೊಂದಿಗೆ ಲಿಂ. ಜಗದ್ಗುರು ಮಾತೆ ಮಹಾದೇವಿ ಅವರ ಸಾನ್ನಿಧ್ಯದಲ್ಲಿ ಕಳೆದ ೨೨ ವರ್ಷಗಳ ಹಿಂದೆ ಕಲ್ಯಾಣದಲ್ಲಿ ಮೊದಲ ಕಲ್ಯಾಣ ಪರ್ವ ಆರಂಭಿಸಲಾಗಿದ್ದು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈಗ ನಡೆಯುತ್ತಿರುವ ೨೩ನೇ ಕಲ್ಯಾಣ ಪರ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರ ಪ್ರದೇಶ, ತೆಲಂಗಾಣ ಸೇರಿ ಎಲ್ಲೆಡೆಯಿಂದ ಬಸವ ಭಕ್ತರು ಭಾವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರವೀಂದ್ರ ಕೊಳಕೂರ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯ ರಚಿಸಿ ಮಾನವೀಯ ಮೌಲ್ಯಗಳು ಬಿತ್ತಿದ್ದಾರೆ. ಶರಣರ ತತ್ವಗಳು ಮನೆ-ಮನಗಳಿಗೆ ಮುಟ್ಟಿಸುವ ಉದ್ದೇಶದಿಂದ ಲಿಂ.ಡಾ.ಮಾತೆ ಮಹಾದೇವಿ ಅವರು ಕಲ್ಯಾಣದಲ್ಲಿ ಕಲ್ಯಾಣ ಪರ್ವ ಆರಂಭಿಸಿದ್ದಾರೆ. ೨೩ನೇ ಕಲ್ಯಾಣ ಪರ್ವಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡಿನ ವಿವಿಧೆಡೆಯಿಂದ ಹೊರ ನಾಡಿನಿಂದ ಬರುವ ಭಕ್ತರಿಗಾಗಿ ಮೂರು ದಿನ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಶ್ರೀ ಅನಿಮಿಷಾನಂದ ಸ್ವಾಮೀಜಿ ಮಾತನಾಡಿ, ಕಾರ್ಯಕ್ರಮದ ವಿವರ ನೀಡಿದರು. ಮಾತೆ ವಿಜಯಾಂಬಿಕಾ, ಲಕ್ಷ್ಮೀಕಾಂತ ಜಾಂತೆ, ಶಿವರಾಜ ನರಶೆಟ್ಟಿ, ರೇವಣಸಿದ್ದಪ್ಪ ಸುಗರೆ, ಜಯಶ್ರೀ ಪಾಟೀಲ್, ಶಿವು ಕುದ್ರೆ ಪರ್ತಾಪುರ ಇದ್ದರು.