ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಾಮೂಹಿಕ ವಚನ ಪಾರಾಯಣ ಕಾರ್ಯಕ್ರಮವನ್ನು ನ್ಯಾಯಾಧೀಶ ಭರತ ಯೋಗೇಶ ಕರಗುದರಿ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಎಂ.ಜಿ.ಮುಳೆ, ವೈಜಿನಾಥ ಕಾಮಶೆಟ್ಟಿ ಇತರರಿದ್ದರು. 
ಜಿಲ್ಲೆ

ವಚನ ಪಾರಾಯಣದಿಂದ ಸಕಾರಾತ್ಮಕ ಚಿಂತನೆ

ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯ ಉಗಮವಾದ ಈ ನೆಲದಲ್ಲಿ ಕುಳಿತು ಸಾಮೂಹಿಕ ವಚನ ಪಾರಾಯಣ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಸಿವಿಲ್ ನ್ಯಾಯಾಧೀಶ ಭರತ ಯೋಗೇಶ ಕರಗುದರಿ ಹೇಳಿದರು.

ಅನುಭವ ಮಂಟಪ ಪರಿಸರದಲ್ಲಿ ನ.೨೫, ೨೬ರಂದು ನಡೆಯಲಿರುವ ೪೪ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ನಿಮಿತ್ತ ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ವಚನ ಪಾರಾಯಣಕ್ಕೆ ಚಾಲನೆ ನೀಡಿದ ಅವರು, ಬಸವಾದಿ ಶರಣರ ವಚನಗಳು ಜಗತ್ತಿಗೆ ದಾರಿದೀಪವಾಗಿವೆ. ವಚನಕಾರರ ಮೌಲ್ಯಯುತ ಮಾತುಗಳೇ ವಚನಗಳು. ಸಾಮೂಹಿಕ ವಚನ ಪಾರಾಯಣದಿಂದ ಮನಸ್ಸು ಪ್ರಸನ್ನವಾಗಿ ಸಕಾರಾತ್ಮಕ ಚಿಂತನೆಯಲ್ಲಿ ತೊಡಗುತ್ತದೆ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದ ಈ ಪಾರಾಯಣ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆ ವಹಿಸಿದ್ದರು. ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಪೂಜ್ಯ ಸತ್ಯಕ್ಕ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಂಕರಲಿಂಗ ಸ್ವಾಮೀಜಿ ಅವರು ಸಮ್ಮುಖ ವಹಿಸಿದ್ದರು. ಮಾಜಿ ಶಾಸಕ ಎಂ.ಜಿ. ಮುಳೆ, ವೈಜಿನಾಥ ಕಾಮಶೆಟ್ಟಿ ಇತರರಿದ್ದರು.

ವಚನ ಪಾರಾಯಣ ಸಮಿತಿ ಅಧ್ಯಕ್ಷೆ ರಾಜಶ್ರಿ ಜಗನ್ನಾಥ ಖೂಬಾ ಸ್ವಾಗತಿಸಿದರು. ರಾಜು ಜುಬರೆ ವಚನ ಪ್ರಾರ್ಥನೆ, ಹಾವಗಿ ಶರಣರು, ಯಲ್ಲನಗೌಡ ಬಾಗಲಕೋಟ ಅವರು ವಚನ ಸಂಗೀತ ಹಾಗೂ ಮಂಗಲಾ ಶಾಂತಕುಮಾರ ಗುಳಶೆಟ್ಟಿ ಅವರಿಂದ ಭಕ್ತಿದಾಸೋಹ ನಡೆಯಿತು. ನಗರ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಪಾರಾಯಣದಲ್ಲಿ ಪಾಲ್ಗೊಂಡಿದ್ದರು.

ಉತ್ತಮ ಪ್ರತಿಕ್ರಿಯೆ: ವಚನ ಪ್ರಜ್ಞೆ ಜನಮನದಲ್ಲಿ ಮೂಡಿಸುವ ಆಶಯದೊಂದಿಗೆ ಆಯೋಜಿಸಿದ ವಿಶಿಷ್ಟವಾದ ಸಾಮೂಹಿಕ ವಚನ ಪಾರಾಯಣ ಕಾರ್ಯಕ್ರಮಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭಕ್ಕೂ ಮುನ್ನ ಬೆಳಗ್ಗೆ ೬ರ ಹೊತ್ತಿಗೆ ನೂರಾರು ಬಸವ ಭಕ್ತರು ಆಗಮಿಸಿ ರಾಗಬದ್ಧವಾಗಿ ಸುಪ್ರಭಾತ ಧಾಟಿಯಲ್ಲಿ ಏಕಕಂಠವಾಗಿ ನಡೆದ ಪಾರಾಯಣದಲ್ಲಿ ಭಕ್ತಿ-ಶ್ರದ್ಧೆಯಿಂದ ಧ್ವನಿಗೂಡಿಸಿದರು.