ಬಸವಕಲ್ಯಾಣದಲ್ಲಿ ಮಂಗಳವಾರ ನಡೆದ ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನ ೩೮ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಎಂ.ಜಿ.ಮುಳೆ, ಚಿಂತಕ ಡಾ.ತಾತ್ಯಾರಾವ ಕಾಂಬಳೆ, ಡಿಡಿಪಿಯು ಚಂದ್ರಕಾಂತ ಶಹಾಬಾದಕರ್, ಮುಖಂಡ ರವೀಂದ್ರ ಗಾಯಕವಾಡ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಕಾಂಬಳೆ ಕೊಡುಗೆ ಅಪಾರ

ಬಸವಕಲ್ಯಾಣ: ಜನರ ಹಿತ ಕಾಪಾಡುವುದರ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧವಾಗಿರುವುದಾಗಿ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಶಿಕ್ಷಣ ಸಂಸ್ಥೆಯ ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನ ೩೮ನೇ ಸಂಸ್ಥಾಪನಾ ದಿನ, ಪ್ರಶಸ್ತಿ ಪ್ರದಾನ, ದ್ವಿತೀಯ ಪಿಯುಸಿಯಲ್ಲಿ ಅಗ್ರಶ್ರೇಣಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯವಾದಿ, ಚಿಂತಕರೂ ಆಗಿರುವ ಡಾ.ತಾತ್ಯಾರಾವ ಕಾಂಬಳೆ ನಾಡು ಕಂಡ ಅಪರೂಪದ ವ್ಯಕ್ತಿ. ನಾನು ಅವರ ಶಿಷ್ಯ. ಅವರ ನಡೆ-ನುಡಿಯಿಂದ ವಿದ್ಯಾರ್ಥಿ ದೆಸೆಯಿಂದಲೇ ಪ್ರೇರಣೆ ಪಡೆದಿದ್ದೇನೆ ಎಂದರು.

ಬೀದರ್ ಜಿಲ್ಲೆ ಶರಣರ ನಾಡಾಗಿದ್ದು, ಸಮಾನತೆ ಸಾರಿದ ಪುಣ್ಯಕ್ಷೇತ್ರದಲ್ಲಿ ಬಸವಣ್ಣನವರ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ ಇದರಡಿ ಡಾ.ಅಂಬೇಡ್ಕರ್ ಕಾಲೇಜು ಆರಂಭಿಸಿರುವ ಕೀರ್ತಿ ಡಾ.ಕಾಂಬಳೆ ಅವರಿಗೆ ಸಲ್ಲುತ್ತದೆ. ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷರಾದ ಚಿಂತಕ ಡಾ.ತಾತ್ಯಾರಾವ ಕಾಂಬಳೆ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಮತ್ತು ಚಿಂತನೆಯ ಕೃತಿಗಳನ್ನು ಅಧ್ಯಯನ ಮೂಲಕ ಚಾರಿತ್ರ್ಯವನ್ನು ಉತ್ತಮಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕ ರಾಷ್ಟ್ರದ ಹಿತರಕ್ಷಣೆ, ಐಕ್ಯತೆ, ಅಖಂಡತೆ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಲು ಬದ್ಧನಾಗಿರಬೇಕು ಎಂದು ಸಲಹೆ ನೀಡಿದರು.

ಪಿಯು ಡಿಡಿ ಚಂದ್ರಕಾಂತ ಎಂ.ಶಹಾಬಾದಕರ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಆಕರ್ಷಿತರಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೊಟ್ಟೆಪಾಡಿಗಾಗಿ ಮಾತ್ರವಲ್ಲದೆ ಜ್ಞಾನಕ್ಕಾಗಿ ಶಿಕ್ಷಣ ಪಡೆಯಲು ಪರಿಶ್ರಮಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ರಾಷ್ಟ್ರದ ಉತ್ತಮ ನಾಗರಿಕನಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ, ಸನ್ಮಾನಿತರ ಪರವಾಗಿ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೆಗಾಂವ ಮಾತನಾಡಿದರು.

ಮಾಜಿ ಎಂಎಲ್‌ಸಿ ವಿಜಯಸಿಂಗ್, ಡಾ.ಬಿ.ಆರ್. ಅಂಬೇಡ್ಕರ್ ಯುಥ್ ಕ್ಲಬ್ ಅಧ್ಯಕ್ಷ, ಮುಖಂಡ ರವೀಂದ್ರ ಗಾಯಕವಾಡ, ಪೌರಾಯುಕ್ತ ರಾಜು ಬಣಕಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪಕುಮಾರ ಉತ್ತಮ, ಪ್ರಮುಖರಾದ ಹಣಮಂತ ಕಾಂಬಳೆ, ನರಸಿಂಗರಾವ ಕಾಂಬಳೆ, ಪ್ರಹ್ಲಾದರಾವ ಮೋರೆ, ಅಬ್ದುಲ್ ರಹೆಮಾನ್ ಹಾಜಿ, ಮಿರ್ಜಾ ಅನ್ವರ್ ಬೇಗ್, ಸದಾನಂದ ಭೋಸ್ಲೆ ಇತರರಿದ್ದರು.
ಪ್ರಾಚಾರ್ಯ ಡಾ.ಜೈಶೇನ್‌ಪ್ರಸಾದ ಆರ್. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಛಲವಾದಿ ನಿರೂಪಣೆ ಮಾಡಿದರು. ಕು. ಕುಂಕುಂ, ಸುಮಿತಾ, ಅಕ್ಷತಾ, ರಕ್ಷಿತಾ ಸ್ವಾಗತಗೀತೆ ಹಾಡಿದರು.

ನಾಲ್ವರಿಗೆ ಡಾ.ಅಂಬೇಡ್ಕರ್ ರತ್ನ ಪ್ರಶಸ್ತಿ ಪ್ರದಾನ: ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನ ಸಂಸ್ಥಾಪನಾ ದಿನ ನಿಮಿತ್ತ ಎಂಎಲ್‌ಸಿ ಎಂ.ಜಿ. ಮುಳೆ, ಚಿಂತಕ ಡಾ.ತಾತ್ಯಾರಾವ ಕಾಂಬಳೆ, ಪಿಯು ಡಿಡಿ ಚಂದ್ರಕಾಂತ ಶಹಾಬಾದಕರ್ ಮತ್ತು ಮುಖಂಡ ರವೀಂದ್ರ ಗಾಯಕವಾಡ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಲೀಪ ಶಿಂಧೆ, ಸುರೇಶ ಅಕ್ಕಣ್ಣ, ಲಕ್ಷ್ಮಣರಾವ ಗುಪ್ತಾ, ಡಾ.ಕಾಶೀನಾಥ ಚಲ್ವಾ, ತಿಪ್ಪಣ್ಣ ಶಿವಪುರೆ, ನರಸಿಂಗರೆಡ್ಡಿ ಗದಲೆಗಾಂವ, ಜೋಶಿ, ಮಾಣಿಕ ಭುರೆ, ಉದಯಕುಮಾರ ಮುಳೆ, ಪಿಎಸ್‌ಐ ಜಯಶ್ರೀ ಹೊಡಲ್, ಶಿವಾಜಿ ಶಿಂದೆ, ನಾಗನಾಥ ಗಜರೆ, ವಿನೋದ ಜಾಧವ್, ಮಂಜು ಶಿಂದೆ, ವಿಲಾಸ ಜಾಧವ್, ಸುಮೇದ ಗಜರೆ, ಗೋಪಾಳ ಗಜರೆ ಸೇರಿ ವಿವಿಧ ಕ್ಷೇತ್ರದ ೩೮ ಜನರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.