ಬಸವಕಲ್ಯಾಣ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಿಪಿಐ ರಘುವೀರಸಿಂಗ್ ಠಾಕೂರ ಸಲಹೆ ನೀಡಿದರು.
ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ೩೪ನೇ ವಲಯ ಮಟ್ಟದ ಬಾಲ್ ಗೇಮ್ (ವಾಲಿಬಾಲ್, ಹ್ಯಾಂಡ್ ಬಾಲ್, ಬಾಸ್ಕೆಟ್ ಬಾಲ್) ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, 10 ಜಿಲ್ಲೆಗಳಿಂದ ಆಯ್ದ ಸ್ಪರ್ಧಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ ಆಗುವ ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಿ.ರಾಜೇಶ್ವರರಾವ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಸಬಲತೆಗೆ ಕ್ರೀಡೆ ಪೂರಕ. ವಿದ್ಯಾರ್ಥಿಗಳೆಲ್ಲರೂ ಆಟೋಟಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಬೇಕು ಎಂದು ಹೇಳಿದರು.
ಹಿರಿಯ ಶಿಕ್ಷಕ ಹೇಮಂತ ಚವ್ಹಾಣ್ ಸ್ವಾಗತಿಸಿದರು. ಎಂಎA ನೂಲ್ಕರ್ ವಂದಿಸಿದರು. ಕೆ.ಕೆ. ವಾಲ್ಮೀಕಿ ನಿರೂಪಣೆ ಮಾಡಿದರು. ಸಂಗೀತ ಶಿಕ್ಷಕಿ ಪ್ರಾಜಕ್ತಾ ಪ್ರಾರ್ಥನಾ ಗೀತೆ ಹಾಡಿದರು. ರಾಜ್ಯದ ೧೦ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.