ಬಸವಕಲ್ಯಾಣ: ಒತ್ತಡದ ಬದುಕಿನಲ್ಲಿ ಸಮಾಧಾನ, ಶಾಂತಿ, ನೆಮ್ಮದಿಗೆ ಆಧ್ಯಾತ್ಮಿಕ ಪ್ರವಚನಗಳು ಅವಶ್ಯಕ ಎಂದು ಸಹಾಯಕ ಆಯುಕ್ತ ಪ್ರಕಾಶ ಕುದರಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಬಸವ ತತ್ವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಕಾಯಕ ಭೂಮಿಯಲ್ಲಿ ಕೆಲಸ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿ ನಾನು ತುಂಬಾ ಸಂತೋಷದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.
ಶರಣರ ಕಾಯಕ ಭೂಮಿ ಪ್ರವಾಸಿ ತಾಣವಾಗಿ ಸರ್ಕಾರದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಐತಿಹಾಸಿಕ ನಗರವಾದ ಕಲ್ಯಾಣ ಜಿಲ್ಲಾ ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದು, ಬರುವ ದಿನಗಳಲ್ಲಿ ಎತ್ತರವಾಗಿ ಬೆಳೆಯಲಿದೆ ಎಂದು ಸದಾಶಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಭಾಲ್ಕಿಯ ಶ್ರೀ ನಿರಂಜನ ಸ್ವಾಮೀಜಿ ಮಾತನಾಡಿ, ೭೭೦ ಆತ್ಮಜ್ಞಾನಿಗಳನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಅದಕ್ಕಾಗಿ ಬಸವಣ್ಣನವರನ್ನು ಅಧ್ಯಾತ್ಮ ಲೋಕದ ದೃವತಾರೆ ಎಂದು ಹೇಳಲಾಗುತ್ತದೆ. ಅನುಭವ ಮಂಟಪಕ್ಕೆ ಬಂದ ಶರಣರಿಗೆ ಕೇವಲ ಪಾಠ ಪ್ರವಚನ ರೂಪದಲ್ಲಿ ಹೇಳದೆ ಅದನ್ನು ಪ್ರಾಯೋಗಿಕ ರೂಪದಲ್ಲಿ ಹೇಳಿದರು. ಒಳಗೂ ಹೊರಗೂ ಶ್ರೀಮತರಾಗುವ ಪರಿಯನ್ನ ಬಸವಣ್ಣನವರು ಹೇಳಿಕೊಟ್ಟರು ಎಂದು ಹೇಳಿದರು.
ಮುಚಳಂಬನ ಶ್ರೀ ನಾಗಭೂಷಣ ಸಂಸ್ಥಾನಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಶ್ರಾವಣ ಎಂದರೆ ಕೇಳು ಆಲಿಸು ಎಂಬರ್ಥ. ಶರಣರು, ಸಂತರು ಬರೆದ ವಚನ ಮತ್ತು ಸುಂದರ ಮಾತುಗಳನ್ನು ಆಲಿಸುವುದಾಗಿದೆ. ಮನವನ್ನು ತೃಪ್ತಿ ಮಾಡುವುದು ಜ್ಞಾನ ಪ್ರಸಾದವಾಗಿದೆ. ಈ ಜ್ಞಾನ ಪ್ರಸಾದ ಸ್ವೀಕರಿಸಲು ಒಂದು ತಿಂಗಳು ದಿನವೂ ಬಸವೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲ ಆಗಮಿಸಬೇಕು ಎಂದು ತಿಳಿಸಿದರು.
ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಸುಲೋಚನಾ ಮಾಮಾ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ರೇವಣಪ್ಪ ರಾಯವಾಡೆ, ಭದ್ರಿನಾಥ ಪಾಟೀಲ್, ಮಲ್ಲಯ್ಯ ಸ್ವಾಮಿ ಹಾಗೂ ವಿಶ್ವಸ್ಥರಾದ ಗದಗೆಪ್ಪ ಹಲಶಟ್ಟೆ ಇತರರಿದ್ದರು. ಬಿಡಿಪಿಸಿ ಸಹ-ಕಾರ್ಯದರ್ಶಿ ವಿವೇಕಾನಂದ ಹೊದಲೂರೆ ಸ್ವಾಗತಿಸಿದರು. ಜ್ಯೋತಿ ತುಗಾಂವೆ ನಿರೂಪಣೆ ಮಾಡಿ ವಂದಿಸಿದರು.
ಒಳ ಶ್ರೀಮಂತಿಕೆಯ ಲಕ್ಷಣಗಳೆಂದರೆ ಶಾಂತಿ, ನೆಮ್ಮದಿ, ತೃಪ್ತಿ, ಆನಂದ ಹೊರಗಿನ ಶ್ರೀಮಂತಿಕೆ ಎಂದರೆ ಜೀವನಕ್ಕೆ ಬೇಕಾದ ಸೌಲಭ್ಯ ಪಡೆಯುವುದು ಎನ್ನುತ್ತಾರೆ. ಇಂತಹ ವಿಷಯಗಳ ಕುರಿತು ಶ್ರಾವಣಮಾಸ ಒಂದು ತಿಂಗಳ ಪರ್ಯಂತರ ಈ ದೇವಸ್ಥಾನ ಪ್ರಾಂಗಣದಲ್ಲಿ ಶ್ರೀ ಪ್ರಣವಾನಂದ ಶ್ರೀಗಳಿಂದ ಪ್ರವಚನ ನಡೆಯಲಿದೆ. ಇದರ ಉಪಯೋಗ ಎಲ್ಲ ಬಸವ ಭಕ್ತರು ಪಡೆಯಬೇಕು.
| ಶ್ರೀ ನಿರಂಜನ ಸ್ವಾಮೀಜಿ ಭಾಲ್ಕಿ