ಜಿಲ್ಲೆ

27 ರಂದು ಬಸವ ಸಂಸ್ಕೃತಿ ಅಭಿಯಾನ

ತುಮಕೂರು: ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಸೆ.1 ರಿಂದ 30ರವರೆಗೆ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ತುಮಕೂರು ಜಿಲ್ಲೆಗೆ ಸೆ.27 ರಂದು ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಲಿಂಗಾಯತ ಮಠಾಧೀಶರ ಒಕ್ಕೂಟದವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ರಾಮನಗರದಿಂದ ಆಗಮಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ರಥವನ್ನು ನಗರದ ಹೊರವಲಯದ ಮರಳೂರು ಕೆರೆ ಬಳಿಯ ವಾಲ್ಮೀಕಿ ವೃತ್ತದಲ್ಲಿ ಸ್ವಾಗತಿಸಲಾಗುವುದು. ತದ ನಂತರ ಅಭಿಯಾನದ ಮೆರವಣಿಗೆ, ಮಕ್ಕಳಿಗೆ ಬಸವತತ್ವದ ಕುರಿತು ಸಂವಾದ, ಬಹಿರಂಗ ಸಭೆಯನ್ನು ಆಯೋಜಿಸಲಾಗಿದ್ದು, ನಗರದ ಶ್ರೀಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಅಭಿಯಾನ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರಾದ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರಸ್ವಾಮೀಜಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

27 ರಂದು ಬೆಳಗ್ಗೆ 9.30ಕ್ಕೆ ಸಿದ್ಧಿ ವಿನಾಯಕ ಸಮುದಾಯ ಭವನದಲ್ಲಿ ಬೆಟ್ಟಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀಚಂದ್ರಶೇಖರ ಸ್ವಾಮಿಗಳು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜಿ.ಬಿ. ನಾಗಭೂಷಣ್​ ಕಾರ್ಯಕ್ರಮ ನಿರ್ವಹಿಸುವರು.

ಬೆಳಗ್ಗೆ 11ಕ್ಕೆ ವಿದ್ಯಾರ್ಥಿಗಳು ಯುವ ಜನರು ಮತ್ತು ಸಾರ್ವಜನಿಕರೊಂದಿಗೆ ವಚನ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು, ಸಾಣೆಹಳ್ಳಿಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಂಬಳ- ಗದಗ ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಕೂಡಲ ಸಂಗಮದ ಬಸವ ಧರ್ಮ ಪೀಠದ ಡಾ.ಗಂಗಾ ಮಾತಾಜಿ, ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ಧೇಶ್ವರ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾಯದರ್ಶಿ ಎನ್​.ಬಿ.ಪ್ರದಿಪಕುಮಾರ್​ ಹಾಗು  ಹಾಲನೂರು ಲೇಪಾಕ್ಷ ಭಾಗವಹಿಸುವರು.

ರಥದ ಮೆರವಣಿಗೆ: ಅಂದು ಮಧ್ಯಾಹ್ನ 2.30ಕ್ಕೆ ಜಯದೇವ ಮುರುಘರಾಜೇಂದ್ರ ಹಾಸ್ಟೆಲ್​ ಆವರಣದಿಂದ ಬಸವ ಸಂಸ್ಕೃತಿ ಅಭಿಯಾನದ ರಥದ ಮೆರವಣಿಗೆಯು ಮಠಾಧೀಶರ ನೇತೃತ್ವದಲ್ಲಿ ಆರಂಭವಾಗುವುದು. ಇದಕ್ಕೆ ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಚಾಲನೆ ನೀಡುವರು ಎಂದು ಅಭಿಯಾನದ ಮೆರವಣಿಗೆ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್​ ಹೇಳಿದರು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ, ಚಂದ್ರೇಖರಸ್ವಾಮೀಜಿ, ಡಾ.ಎಸ್​.ಪರಮೇಶ್​, ಕೆ.ಎಸ್​.ಸಿದ್ದಲಿಂಗಪ್ಪ, ಎಂ.ಜಿ.ಸಿದ್ದರಾಮಯ್ಯ ಉಪಸ್ಥಿತರಿರುವರು.

ರಾತ್ರಿ 8ಕ್ಕೆ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ಜಂಗಮದೆಡೆಗೆ ನಾಟಕ ಪ್ರದರ್ಶಿಸಲಾಗುವುದು.

ಸಂಜೆ 5-.30ಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಕೆರೆಗೋಡಿ ರಂಗಾಪುರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತಿಪಟೂರಿನ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು. ಬಿ.ಸಿ. ಶೈಲಾನಾಗರಾಜ್​ ಅವರ ಬಸವ ಸಂಸ್ಕೃತಿ ಕೃತಿಯನ್ನು ಶಾಸಕ ಕೆ.ಷಡಕ್ಷರಿ ಬಿಡುಗಡೆ ಮಾಡುವರು. ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡುವರು. ಮಾಜಿ ಸಂಸದ ಜಿ.ಎಸ್​.ಬಸವರಾಜು, ಟಿ.ಕೆ. ನಂಜುಂಡಪ್ಪ, ನ್ಯಾಯಮೂರ್ತಿ ಎಸ್​.ಎನ್​ ಕೆಂಪಗೌಡರ್​ ಭಾಗವಹಿಸುವರು.