ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸಕ್ತ ಕೃಷಿ ಬಿಕ್ಕಟ್ಟಿಗೆ ಸಹಕಾರಿ ಕೃಷಿ ಪದ್ಧತಿಯೇ ಶಾಶ್ವತ ಪರಿಹಾರ ಮಾತ್ರವಲ್ಲದೆ, ವರದಾನವೂ ಆಗಿದೆ ಎಂದು ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಸಪ್ಪ ಶ. ಮುಂದಿನಮನಿ ಸ್ಮರಣೆ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಹಾಗೂ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಬಿಕ್ಕಟ್ಟುಗಳು ಕುರಿತು ಮಾತನಾಡಿದರು.
1950ರಲ್ಲಿ ಕೃಷಿ ಭಾರತದ ಆಥಿರ್ಕತೆಯ ಬೆನ್ನೆಲುಬು ಎಂದು ಕರೆಯಲಾಗಿತ್ತು. ಕೃಷಿಯಿಂದ ಶೇ. 50 ಪಾಲು ಆದಾಯವಿತ್ತು. ಇಂದು ಕೃಷಿಯಿಂದ ಶೇ. 15ರಷ್ಟು ಮಾತ್ರ ಆದಾಯವಿದೆ. ರೈತರಿಗೆ ವೈಜ್ಞಾನಿಕ ಬೆಲೆ ನೀತಿ ಇಲ್ಲ. ರೈತರು ಸಾಲದ ಸುಳಿಯಿಂದ ಮುಕ್ತವಾಗುವ ಅವಕಾಶವಿಲ್ಲ. ಒಂದೆಡೆ ಉದ್ಯಮಪತಿಗಳ ಸಾಲ ಮನ್ನಾ ಮಾಡುವ ಸರ್ಕಾರ, ರೈತರಿಗೆ ನಬಾರ್ಡದಿಂದ ಸಿಗಬೇಕಾದ ಸಾಲ ಕಡಿಮೆ ಮಾಡುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಅಧ್ಯತೆ ವಹಿಸಿದ್ದ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ ಮಾತನಾಡಿದರು.
ತಾಲೂಕಿನ ಮರೇವಾಡದ ಪ್ರಗತಿಪರ ರೈತ ಬಸಪ್ಪ ಸಲಕಿ ಅವರಿಗೆ ಬಸವ ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸದಾನಂದ ಮುಂದಿನಮನಿ, ಶಿವಾನಂದ ಭಾವಿಕಟ್ಟಿ, ಹೇಮಾ ಕಿರೇಸೂರ, ನಾಗರಾಜ ಕಲ್ಲೂರಿ, ರಾಜೇಶ ನಾವಲಗಿಮಠ, ಶ್ರೀಧರ ಹಂಚಿನಾಳ, ಕೆ.ಎಲ್. ಜಾಕೋಜಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.