ವಿಜಯವಾಣಿ ಸುದ್ದಿಜಾಲ ಧಾರವಾಡ
ಬಸವಣ್ಣನವರು ಕೇವಲ ಲಿಂಗಾಯತರಿಗೆ ಸೀಮಿತವಾಗಿಲ್ಲ. ಅವರು ಎಲ್ಲ ಸಮಾಜ ಮತ್ತು ಸಮುದಾಯಗಳ ಪ್ರತಿನಿಧಿ ಆಗಿದ್ದಾರೆ ಎಂದು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದ ಕರ್ನಾಟಕ ಇಲ್ಲಿನ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠವು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಮಾನವ ಕುಲದ ಶ್ರೇಷ್ಠ ಮಹಾನ್ ದಾರ್ಶನಿಕರು. ಅವರ ವಿಚಾರಗಳು ಇಂದಿಗೂ ಪ್ರಸ್ತುತ. ತಳ ಸಮುದಾಯಗಳಿಗೆ ಸಮಾನತೆ ಕಲ್ಪಿಸುವಲ್ಲಿ ಮತ್ತು 12ನೆಯ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆ ನೀಡಿ ಕ್ರಾಂತಿ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಬಸವಣ್ಣನವರ ವಚನಗಳು ಮತ್ತು ತತ್ವಗಳನ್ನು ಎಲ್ಲ ಭಾಷೆಗಳಲ್ಲಿ ಅನುವಾದಿಸಿ ದೇಶದ ಜನರಿಗೆ ಬಸವಣ್ಣನವರ ವಚನಗಳು ತಿಳಿಸುವ ಕಾರ್ಯ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಕವಿವಿ ಬಸವೇಶ್ವರ ಪೀಠ ಕಾರ್ಯಪ್ರವೃತ್ತ ಆಗಲಿ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ವಚನ ಸಾಹಿತ್ಯ ಸಾರ್ವಕಾಲಿಕ. ಸಾಮಾಜಿಕ ಸಮಸ್ಯೆಗಳಿಗೆ ಬಸವಣ್ಣನವರ ವಚನಗಳಲ್ಲಿ ಪರಿಹಾರಗಳನ್ನು ಕಾಣಬಹುದು ಎಂದರು.
ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಕುಂದೂರಮಠದ ಡಾ. ಶರತ್‌ಚಂದ್ರ ಸ್ವಾಮೀಜಿ ಬಸವೇಶ್ವರ ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಕ ಬಸವಣ್ಣನವರನ್ನು ಅನುಭವ ಮಂಟಪದ ಮೂಲಕ ಬಸವಣ್ಣನವರು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದರು. ಬಸವಣ್ಣನವರ ವಿಚಾರ ಮತ್ತು ತತ್ವಗಳು ಪ್ರತಿಯೊಬ್ಬರಿಗೂಮಾರ್ಗಸೂಚಿಗಳಾಗಿವೆ ಎಂದರು.
ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ಮಾತನಾಡಿದರು. ಬಸವಣ್ಣನವರ ವಚಗಳನ್ನಾಧರಿಸಿದ ಕೂಡಲಸಂಗಮ ದೃಶ್ಯರೂಪಕ ಪ್ರದರ್ಶಿಸಲಾಯಿತು. ಡಾ. ಉಜ್ವಲಾ ಹಿರೇಮಠ ರಚಿಸಿದ `ವಚನ ಸಾಹಿತ್ಯದ ಸಂರಕ್ಷಕ: ಡಾ. ಪಿ.ಜಿ. ಹಳಕಟ್ಟಿ' ವಚನ ಗ್ರಂಥ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಚಂದ್ರಕಾ0ತ ಬೆಲ್ಲದ, ಮೈಸೂರಿನ ವಾಸ್ತುಶಿಲ್ಪಿ ಶಿವಲಿಂಗಪ್ಪ ಎಸ್, ಕುಲಸಚಿವರಾದ ಡಾ. ಎ. ಚೆನ್ನಪ್ಪ, ಡಾ. ಎನ್.ವೈ. ಮಟ್ಟಿಹಾಳ, ಹಣಕಾಸು ಅಽಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ. ಕುಂದಗೋಳ, ಡಾ. ವೀರಣ್ಣ ರಾಜೂರ, ಇತರರಿದ್ದರು.