ಜಿಲ್ಲೆ

ಬಸವಣ್ಣರಿಂದ ಜಗತ್ತಿನ ಮೊದಲ ಸಂಸತ್ತು ರಚನೆ

ಉಡುಪಿ: ಜಗತ್ತಿನಲ್ಲಿ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ರಚಿಸುವ ಮೂಲಕ ಸರ್ವ ಜನಾಂಗದ ಶ್ರೇಯಾಭಿವೃದ್ಧಿ ಬಸವಣ್ಣನವರು ಶ್ರಮಿಸಿದ್ದರು. ಸ್ತ್ರೀ-ಪುರುಷರೆಂಬ ತಾರತಮ್ಯವಿಲ್ಲದೆ ಮುಕ್ತ ವಾತಾವರಣವನ್ನು ಕಲ್ಪಿಸಿದ ಅವರು ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಹೇಳಿದರು.

ಭಾನುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಹಿಂದೆ ಬಸವಕಲ್ಯಾಣದಲ್ಲಿ ಕೆಲಸ ನಿರ್ವಹಿಸಲು ನನಗೆ ಅವಕಾಶ ಸಿಕ್ಕಿತ್ತು. ಬಸವಕಲ್ಯಾಣದಲ್ಲಿ ಬಸವಣ್ಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಬಸವಣ್ಣನವರನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮಾತನಾಡಿ, ಬಸವಣ್ಣನವರ ಕಾಯಕ ತತ್ವ ಹಾಗೂ ದಾಸೋಹ ತತ್ವ ಇಂದಿಗೆ ತುಂಬಾ ಪ್ರಸ್ತುತ. ಬಸವಣ್ಣನವರ ತತ್ವದಂತೆ ಅಂತರಂಗ ಶುದ್ಧರಾಗಿ ಎಲ್ಲರೂ ಕೆಲಸ ನಿರ್ವಹಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗಿರೀಶ್, ಬಸವಣ್ಣನವರ ವಚನವನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ ರವಿರಾಜ್, ನರಸಿಂಹಮೂರ್ತಿ, ರಾಜೇಶ್ ಭಟ್, ಸಂಗೊಳ್ಳಿ ರಾಯಣ್ಣ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸವಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಬಸವ ಸಮಿತಿ ಜಿಲ್ಲಾ ಅಧ್ಯಕ್ಷ ಶಾಂತೇಗೌಡ ವಂದಿಸಿದರು.