ಸಾಲಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ.ಬಿ.ಖಂಡ್ರೆ ಉದ್ಘಾಟಿಸಿದರು. 
ಜಿಲ್ಲೆ

ಅರ್ಥಶಾಸ್ತ್ರದ ಮೂಲ ತತ್ವ ಪ್ರತಿಪಾದಕ ಬಸವಣ್ಣ

ನಾಗೇಶ ಎಸ್

ಸಾಲಿಗ್ರಾಮ: ಕಾಯಕದಿಂದ ಗಳಿಸಿ, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ವಿನಿಯೋಗಿಸಬೇಕೆಂಬ ಅರ್ಥಶಾಸ್ತ್ರದ ಮೂಲ ತತ್ವವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ್ದರು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಸಾಲಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಜಗತ್ತಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕೊಟ್ಟಿದ್ದೇ ಬಸವಾದಿ ಶರಣರು. ಅನುಭವ ಮಂಟಪದಲ್ಲಿ 900 ವರ್ಷಗಳ ಹಿಂದೆಯೇ ಎಲ್ಲ ಜಾತಿ, ಜನಾಂಗ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ನೀಡಿದ್ದರು. ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತಾಗಿರುವುದರ ಜತೆಗೆ ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಈ ಕಲ್ಪನೆಯನ್ನು ಕೊಟ್ಟಿದ್ದು ನಮ್ಮ ಬಸವಾದಿ ಶರಣರು ಎಂದರು.

ವೀರಶೈವ- ಲಿಂಗಾಯತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸಾ.ರಾ.ಮಹೇಶ್, ಶಾಸಕರಾದ ಡಿ.ರವಿಶಂಕರ್, ಎಚ್.ಎಂ.ಗಣೇಶ್‌ಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಮಾಜಿ ಸದಸ್ಯ ಬಿ.ಎಸ್.ತೋಂಟದಾರ್ಯ ಮಾತನಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಶ್ರೀ, ಗುರುಲಿಂಗ ಜಂಗಮದೇವರ ಮಠ ಗಾವಡಗೆರೆ ಶ್ರೀ ನಟರಾಜಸ್ವಾಮಿ, ರಾವಂದೂರು ಮುರುಘಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಹಾಸನದ ಬಸವಕಲ್ಯಾಣ ಮಠ ಅಂಕನಹಳ್ಳಿ ಮತ್ತು ತಣ್ಣೀರು ಹಳ್ಳಮಠ ಹಾಸನ ಶ್ರೀ ವಿಜಯಕುಮಾರ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಎಂಸಿಡಿಸಿಸಿ ಬ್ಯಾಂಕ್ ನಿದೇರ್ಶಕ ದೊಡ್ಡಸ್ವಾಮೇಗೌಡ, ಮುಡಾ ಮಾಜಿ ಅಧ್ಯಕ್ಷ ಹರದನಹಳ್ಳಿ ವಿಜಯ್, ಕಾರ್ಮಿಕ ಆಯುಕ್ತರಾದ ಭಾರತಿ ಡಿ., ಯುಪಿಸಿಯಲ್ಲಿ ತೇರ್ಗಡೆಯಾದ ಎ.ಸಿ.ಪ್ರೀತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪುಷ್ಪಲತಾ ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ರಾಷ್ಟ್ರೀಯ ಕುಸ್ತಿಪಟು ಬಿಂದು ಕುಮಾರಸ್ವಾಮಿ, ಮುಖಂಡರಾದ ಚಂದ್ರೇಶೇಖರ್, ಸಿ.ಪಿ.ರಮೇಶ್, ವೈ.ಎನ್.ಚಂದ್ರಶೇಖರ್, ಎ.ಎಸ್.ಚನ್ನಬಸಪ್ಪ, ಕೆಂಪರಾಜು, ನಟರಾಜು, ಮಲ್ಲಪ್ಪ, ಸರಗೂರು ನಟರಾಜು, ಕೊಡಿಯಾಲ ಮಹೇಶ್, ಪಶುಪತಿ ಜಗದೀಶ್, ಸರಗೂರು ಶಿವು, ಮುದುಗುಪ್ಪೆ ಕುಮಾರ್, ತಂದ್ರೆ ಅಂಕನಹಳ್ಳಿ ಬಸವರಾಜು, ದಡದಹಳ್ಳಿ ನಟರಾಜ್, ಹೊನ್ನೇನಹಳ್ಳಿ ಗಿರೀಶ್ ಇದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಯೋಗಾನರಸಿಂಹಸ್ವಾಮಿ ದೇವಾಲಯದ ಬಳಿಯಿಂದ ವೇದಿಕೆಯವರೆಗೆ ವಿವಿಧ ಜಾನಪದ ಕಲಾ ತಂಡಗಳು ಮತ್ತು ಕುಂಭ ಕಳಸದೊಂದಿಗೆ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು.