ಜಿಲ್ಲೆ

ಬಸವ ಜಯಂತಿ ಅಂಗವಾಗಿ ಮೆರವಣಿಗೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಆಚರಿಸಲಾದ 5 ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಕುಶಾಲನಗರ ಪಟ್ಟಣದಲ್ಲಿ ನಡೆಸಿದ ಅದ್ದೂರಿ ಮೆರವಣಿಗೆ ಗಮನ ಸೆಳೆಯಿತು. ಈ ವೇಳೆ ಅಲಂಕೃತ ರಥದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರ ಇಟ್ಟು ಮೆರವಣಿಗೆ ನಡೆಸಲಾಯಿತು. ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿಯಿಂದ ಆರಂಭಗೊAಡ ಮೆರವಣಿಗೆ ಪಟ್ಟಣದ ಬಿ.ಎಂ. ರಸ್ತೆ ಹಾಗೂ ರಥಬೀದಿ ಮೂಲಕ ಸಾಗಿ ಗಾಯತ್ರಿ ಕಲ್ಯಾಣ ಮಂದಿರದ ಆವರಣದಲ್ಲಿ ಸಮಾಪನಗೊಂಡಿತು.

ಮೆರವಣಿಗೆಯಲ್ಲಿ ಮಳೆಯ ಸಿಂಚನ ಕೆಲಕಾಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಿರಿಕೊಡ್ಲಿ ಮಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮೆರವಣಿಗೆಗೆ ಚಾಲನೆ ನೀಡಿದ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ,

ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಮಾಜ ಸಾಗಿದರೆ ಜೀವನ ಸುಖಮಯವಾಗಿರುತ್ತದೆ.

`ಕಾಯಕವೇ ಕೈಲಾಸ' ಎಂದು ಬಸವಣ್ಣನವರು ಕಲಿಸಿಕೊಟ್ಟಿದ್ದಾರೆ ಎಂದರು.

ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ ಹಾಗೂ ಮಹಿಳೆಯರು ನಡೆಸಿಕೊಟ್ಟ ನಂದಿಧ್ವಜದ ಕುಣಿತ ಜನರ ಗಮನ ಸೆಳೆಯಿತು. ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ .ಶಿವಪ್ಪ, ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಧುಸೂದನ್, ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ನಂದೀಶ್, ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಕರುಣ್ ಮತ್ತಿತರರು ಇದ್ದರು.

ಬಸವ ಜಯಂತಿ ಅಂಗವಾಗಿ ಪಟ್ಟಣವನ್ನು ಹಸಿರು ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಬೀದಿ ಬದಿಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು.