ಹುಬ್ಬಳ್ಳಿ: ಜಗತ್ತಿಗೆ ಪ್ರಜಾಪ್ರಭುತ್ವವನ್ನು ಬೋಧಿಸಿದವರು ಬಸವಣ್ಣ. ನಮ್ಮ ಸಂವಿಧಾನದ ಮೂಲ ಕಲ್ಪನೆಗಳೆಲ್ಲ ಬಸವಣ್ಣನ ವಚನಗಳಲ್ಲಿ ಕಾಣಬಹುದು. ಪ್ರಜಾಪ್ರಭುತ್ವದ ತಳಹದಿಯೇ ಬಸವ ಧರ್ಮ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಗೋಕುಲ ರಸ್ತೆ ಬಸವ ಕೇಂದ್ರದ ವತಿಯಿಂದ ಭೈರಿದೇವರಕೊಪ್ಪದಲ್ಲಿ ಶಿಕ್ಷಕ, ಸಾಹಿತಿ ಡಾ. ಲಿಂಗರಾಜ ರಾಮಾಪುರ ನಿವಾಸದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿ, ಸಮಾನತೆ, ಜಾತ್ಯಾತೀತ, ಕಾಯಕ, ದಾಸೋಹ ಎಲ್ಲವೂ ಕೂಡ ಬಸವಣ್ಣನ ಅನುಭವ ಮಂಟದಿಂದ ಬಂದಿರುವಂತಹುಗಳು. ಆದ್ದರಿಂದ ಪ್ರತಿಯೊಬ್ಬರೂ ಬಸವಣ್ಣನವರ ವಚನಗಳನ್ನು ಪಚನ ಮಾಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪೊ›. ಸಿದ್ದಣ್ಣ ಲಂಗೋಟಿ ಮಾತನಾಡಿ, ಬಸವಣ್ಣ ಬರೀ ಲಿಂಗಾಯತ ಧರ್ಮಕ್ಕೆ ಸೀಮಿತವಲ್ಲ. ಅವರ ವಚನಗಳನ್ನು ವಿಶ್ವದ 50ಕ್ಕೂ ಹೆಚ್ಚು ದೇಶಗಳ ಭಾಷೆಗಳಿಗೆ ಭಾಷಾಂತರ ಮಾಡಲಾಗಿದೆ. ನಮ್ಮ ದೇಶದ ಯುವಶಕ್ತಿ ಬಸವಣ್ಣನವರನ್ನು ದೂರ ಮಾಡಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಹತ್ತಾರು ವರ್ಷಗಳಿಂದ ಹುಬ್ಬಳ್ಳಿಯ ಬಸವ ಕೇಂದ್ರವು ಕರ್ನಾಟಕದ ಉದ್ದಕ್ಕೂ ಬಸವ ತತ್ವವನ್ನು ಪ್ರಸಾರ ಮಾಡುತ್ತಿದೆ. ಇದು ಸಮಾಜದ ಸ್ವಾಸ್ಥ್ಯನ್ನು ಕಾಪಾಡುವ ಶ್ಲಾಘನೀಯ ಕಾರ್ಯ. ಬಸವಣ್ಣನವರ ವಚನಗಳ ಅಧ್ಯಯನದಿಂದ, ಅಚರಣೆಗಳಿಂದ ಸುಂದರ ಸಮಾಜವನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ಪೊ›.ಜಿ.ಬಿ. ಹಳ್ಯಾಳ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಮಾಯಕಾರ, ರಾಮಚಂದ್ರ ಹದಗಲ್ಲ, ವೀರಣ್ಣ ನೀರಲಗಿ, ವೀರಪ್ಪ ರಾಮಾಪೂರ, ಆರ್.ಸಿ. ಹಲಗತ್ತಿ, ಜಿ.ಬಿ ಪಟ್ಟಣಶೆಟ್ಟಿ, ಎಸ್.ಆರ್.ಶಿರೋಳ, ಮರಿಕಲ್ಲಪ್ಪ ಮಟ್ಟಿ, ಇತರರು ಇದ್ದರು.
ನೇಹಾ, ನವ್ಯಾ, ನಂದೀಶ, ಉಮಾತಾಯಿ ವಚನ ಗಾಯನ ನಡೆಸಿಕೊಟ್ಟರು, ಡಾ.ಲಿಂಗರಾಜ ರಾಮಾಪೂರ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ಹರಕುಣಿ ನಿರ್ವಹಿಸಿದರು. ಸಚಿನ ಬೆಟಗೇರಿ ವಂದಿಸಿದರು.