ವಿಜಯಪುರ: ಮಹಾತ್ಮ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ಒಂದು ವರ್ಷ ತುಂಬಿದ ಹಿನ್ನೆಲೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ‘ಬಸವ ಸಾಂಸ್ಕೃತಿಕ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಸೆ. 1 ರಿಂದ ಅ.1ರವರೆಗೆ ರಾಜ್ಯಾದ್ಯಂತ ರಥಯಾತ್ರೆ ನಡೆಯಲಿದೆ.
ಬಸವ ಜನ್ಮಭೂಮಿ ಬಸವನಬಾಗೇವಾಡಿಯಿಂದ ಆರಂಭಗೊಳ್ಳಲಿರುವ ರಥಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅ.1ರಂದು ಬೆಂಗಳೂರು ತಲುಪಲಿದೆ. ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಸವ ಸಮಿತಿ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ.
ಬಸವಣ್ಣನವರ ಕಾಯಕ, ದಾಸೋಹ, ಸಮಾನತೆಯ ಸಂದೇಶ ಸಾರುವುದು, ಸಮಸಮಾಜದ ನಿರ್ಮಾಣ, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆಯನ್ನು ಕಾಪಾಡುವುದು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ವಚನಗಳಲ್ಲಿರುವ ಸದ್ವಿಚಾರಗಳನ್ನು ಪ್ರಚುರಪಡಿಸುವ ಆಶಯದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಮತ್ತು ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೃತಜ್ಞತಾಪೂರ್ವಕವಾಗಿ ಈ ಅಭಿಯಾನ ಹಮ್ಮಿಕೊಂಡಿರುವುದಾಗಿ ಬಸವನಬಾಗೇವಾಡಿಯ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನದಲ್ಲಿ ಬಸವಾದಿ ಶರಣರ ಭಿತ್ತಿಚಿತ್ರಗಳಿರುವ ಬಸವ ರಥದ ಮೆರವಣಿಗೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ, ಪಾದಯಾತ್ರೆ, ಬಹಿರಂಗ ಸಭೆ, ವಚನ ಸಂಗೀತ,ಉಪನ್ಯಾಸ, ನಾಟಕ ಪ್ರದರ್ಶನ ಇತ್ಯಾದಿ ಚಟುವಟಿಕೆಗಳಿರುತ್ತವೆ. ಬೆಳಗ್ಗೆ 11ಕ್ಕೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ, ಸಂಜೆ 4.30 ರಿಂದ 6 ಗಂಟೆಯವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ, ಸಂಜೆ 6ಕ್ಕೆ ಸಾರ್ವಜನಿಕ ಸಮಾರಂಭ, ರಾತ್ರಿ 8.30ಕ್ಕೆ ಪಂಡಿತಾರಾಧ್ಯ ಶಿವಾಚಾರ್ಯರು ರಚನೆ ಮಾಡಿದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಳ್ಳಲಿದೆ. ಜಗದೀಶ ಆರ್ ಸಂಗೀತ ನಿರ್ದೇಶನ ನೀಡಿದ್ದಾರೆ. ರಾತ್ರಿ ಪ್ರಸಾದದ ವ್ಯವಸ್ಥೆ ಇರಲಿದೆ ಎಂದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಸಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವುದಷ್ಟೇ ಅಲ್ಲ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬಸವಾದಿ ಶರಣರ ಆಶಯಗಳನ್ನು ಅನುಷ್ಟಾನಕ್ಕೆ ತರಲು ಶ್ರಮಿಸುತ್ತಿದೆ. ಈ ಹಿಂದೆ ಜೆ.ಎಚ್. ಪಟೇಲ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಒಬ್ಬರು ಬಸವ ಕಲ್ಯಾಣಕ್ಕೆ ಆದ್ಯತೆ ನೀಡಿದರೆ ಇನ್ನೊಬ್ಬರು ಕೂಡಲಸಂಗಮಕ್ಕೆ ಆದ್ಯತೆ ನೀಡಿದರು. ಬಸವಜನ್ಮ ಭೂಮಿಯ ಅಭಿವೃದ್ಧಿಯೇ ಮರೀಚಿಕೆಯಾಗಿತ್ತು. ಇದೀಗ ಪ್ರತ್ಯೇಕ ಪ್ರಾಧರಿಕಾರ ರಚನೆ ಮೂಲಕ ಆ ಆಶಯ ಈಡೇರುತ್ತಿದೆ. ಪ್ರಾಧಿಕಾರದ ಮೂಲಕ ಬಸವಾದಿ ಶರಣರೆಲ್ಲರ ಜನ್ಮಸ್ಥಳ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬಸವಪ್ರೇಮಿಗಳಾದ ಬಸವರಾಜ ಹರನಾಳ ಹಾಗೂ ವಿ.ಸಿ. ನಾಗಠಾಣ ಮಾತನಾಡಿ, ಬಸವಣ್ಣನವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದು ಸಹ ಅಭಿಯಾನದ ಉದ್ದೇಶವಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನಿಸಿ, ಗೌರವಿಸಲಾಗುತ್ತಿದೆ. ನಾಡಿನ ಲಿಂಗಾಯತ ಮಠಾಧೀಶರು ಹಾಗೂ ಬಸವಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಬಸವರಾಜ ಕೊಂಡಗೂಳಿ, ಡಾ.ರವಿ ಬಿರಾದಾರ ಮತ್ತಿತರರಿದ್ದರು.