ಜಿಲ್ಲೆ

ಶೀಘ್ರದಲ್ಲೇ ಬಸವ ಭವನ ನಿರ್ಮಾಣ

ಕಿರಣ್ ಗೌಡ.ಜಿ

ಎಚ್.ಡಿ.ಕೋಟೆ: ಬಸವ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಜತೆಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.

ಪಟ್ಟಣದ ವೀರಶೈವ ಸಮಾಜದ ನಿವೇಶನದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಜಯಂತಿ ಹಾಗೂ ಬಸವ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವೇಶ್ವರ ಭವನ ನಿರ್ಮಾಣ ಆಗಬೇಕು ಎಂಬುದು ಸಮುದಾಯದ ಬಹುದಿನಗಳ ಬೇಡಿಕೆ ಆಗಿತ್ತು. ಆ ದಿನಗಳು ಸಮೀಪವಿದ್ದು ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು. ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬಂತೆ ನಾನು ನಮ್ಮ ತಂದೆ ಅವಧಿಯಲ್ಲಿ ಸಮುದಾಯದ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದೇವೆ. ಬಸವಣ್ಣ ಅವರ ಜಯಂತಿ ಆಚರಣೆ ಜತೆಗೆ ಅವರ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಅವರು ಅನುಭವ ಮಂಟಪ ಮಾಡಿ ಎಲ್ಲ ಸಮಾಜದವರು ಒಟ್ಟಿಗೆ ಇರುವಂತೆ ನೋಡಿ ಕೊಂಡರು. ಬಸವಣ್ಣ ಅವರ ಹಾದಿಯಲ್ಲಿ ಇಂದಿನ ಮಠಗಳು ಶಿಕ್ಷಣ ಕ್ರಾಂತಿ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಸರ್ಕಾರ ನಡೆಸುವಂತಹ ಕೆಲಸ ಕಾರ್ಯಗಳನ್ನು ಮಠಗಳು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಅವನು ಮಾಡಿರುವ ಕೆಲಸವನ್ನು ನೋಡಬೇಕು. ಬಸವಣ್ಣ ಅವರು ಅದನ್ನು ಮಾಡಿ ತೋರಿಸಿ ಸಮಾಜ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಸಮಾಜ ಒಂದಾಗಿ ಇದ್ದರೆ ಅವಕಾಶ ಸಿಕ್ಕೇ ಸಿಗುತ್ತದೆ. ಒಗ್ಗಟ್ಟು ಇದ್ದರೆ ಮಾತ್ರ ಮುಂದೆ ಬರಲು ಸಾಧ್ಯ ಹಾಗಾಗಿ ಸಮುದಾಯ ಒಗ್ಗಟ್ಟಾಗಿ ಇರಬೇಕು ಎಂದು ಕಿವಿಮಾತು ಹೇಳಿದರು.

ಹಂಚಿಪುರ ಶ್ರೀ ಸಿದ್ದ ಮಲ್ಲೇಶ್ವರ ಮಠದ ಚನ್ನಬಸವಸ್ವಾಮೀಜಿ ಹಾಗೂ ಡದಹಳ್ಳಿ ಗುರುಮಲ್ಲೇಶ್ವರ ಮಠದ ಷಡಕ್ಷರಿಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಎಸ್.ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಿಂದ ಬಸವೇಶ್ವರರ ಪುತ್ಥಳಿಯನ್ನು ಲಿಂಗವಿರುವ ಬೆಳ್ಳಿ ಮಂಟಪದಲ್ಲಿ ಕೂರಿಸಿ ಶರಣರ ವಚನಗಳು ಅಲಂಕೃತ ಚಿತ್ರಗಳು, ವೀರಗಾಸೆ, ವೀರಭದ್ರ ನೃತ್ಯ, ಮಹಿಳಾ ಜಾನಪದ ನೃತ್ಯ, ನಗಾರಿ, ತಮಟೆ, ಬ್ಯಾಂಡ್ ಸೆಟ್, ಗಾಡಿಗೊಂಬೆ, ಡಿಜೆ ಹೀಗೆ ಕಲಾತಂಡಗಳೊಂದಿಗೆ ಮುಖ್ಯ ರಸ್ತೆಯ ಮೂಲಕ ಸಂಭ್ರಮದಿಂದ ಮೆರವಣಿಗೆ ಹೊರಟು ನಿವೇಶನದಲ್ಲಿ ನಿರ್ಮಿಸಿದ್ದ ಅನುಭವ ಮಂಟಪದಲ್ಲಿ ಸಮಾವೇಶಗೊಂಡಿತು.

ಎಂ.ಬಿ.ಪಾಟೀಲ್ ಅವರ ಪುತ್ರ ಬಸವನಗೌಡ ಪಾಟೀಲ್, ಬಿಡುಗಲು ವಿರಕ್ತಮಠ ಮಹದೇವಸ್ವಾಮಿ, ಬೀಚನಹಳ್ಳಿ ಸಿದ್ದಮಲ್ಲೇಶ್ವರ ಪಟ್ಟದ ಮಠದ ನಾಗೇಂದ್ರ ಸ್ವಾಮಿ, ಪುರ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರ ಸ್ವಾಮಿ, ಹಂಚಿಪುರ ಸಿದ್ದಮಲ್ಲೇಶ್ವರ ಪಟ್ಟದ ಕಿರಿಯ ತೋಂಟದಾರ್ಯ ಸ್ವಾಮಿ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ದೇವಮಣಿ, ಮಹಾಸಭಾ ಜಿಲ್ಲಾ ನಿರ್ದೇಶಕ ಮೊತ್ತ ಬಸವರಾಜಪ್ಪ, ತೋಟದ ಬೆಳೆಗಾರರ ಸಂಘದ ಅಧ್ಯಕ್ಷ ಮಾದಾಪುರ ನಂದೀಶ್, ಮುಖಂಡರಾದ ವೀರಪ್ಪ, ಸಿ.ಎನ್.ನಾಗಣ್ಣ, ಸುನಿತಾ ಮಹದೇವಸ್ವಾಮಿ, ಜಕ್ಕಳ್ಳಿ ಮಹದೇವಪ್ಪ, ಮಹಾಸಭಾ ಯುವ ಸಮಿತಿ ಅಧ್ಯಕ್ಷ ಸತೀಶ್, ಶಿವಕುಮಾರ್ ಇದ್ದರು