ಕುಶಾಲನಗರ:
ಬಸವ ತತ್ವ ಪಾಲನೆ ಮಾಡುವ ಎಲ್ಲರಿಗೂ ಅದು ಬದುಕುವ ದಾರಿ ತೋರಿಸುತ್ತದೆ ಎಂದು ಗುಂಡ್ಲುಪೇಟೆ ತಾಲೂಕು ಕಬ್ಬಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯÀ ಎಸ್.ಎಂ. ಸಿದ್ದರಾಜಪ್ಪ ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಐದನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಹಾಪುರುಷರು ಬೌದ್ಧಿಕವಾಗಿ ಬದುಕಿದ್ದಾರೆ. ಆ ಸಾಲಿನಲ್ಲಿ ಬಸವಣ್ಣನವರು ಇದ್ದಾರೆ. ಸಮಾಜಕ್ಕಾಗಿ ಬದುಕಿದವರನ್ನು ಎಲ್ಲಾ ಕಾಲಗಳಲ್ಲೂ ಸ್ಮರಿಸುತ್ತಾರೆ. ಸ್ವಾರ್ಥಕ್ಕಾಗಿ ಬದುಕಿದವರನ್ನು ಎಷ್ಟೇ ದೊಡ್ಡವರಿದ್ದರೂ ಎಂದೂ ಯಾರೂ ಸ್ಮರಿಸುವುದಿಲ್ಲ. ಹಾಗಾಗಿ ಬಸವಣ್ಣನವರು ಎಂದಿಗೂ ಪ್ರಸ್ತುತ. ಸಂಸ್ಕೃತಿಯ ಬೇರುಗಳು ಚೆನ್ನಾಗಿದ್ದು ಆಳಕ್ಕೆ ಇಳಿದಿದ್ದರೆ ಉತ್ತಮ ಸಮಾಜ ಇರಲು ಸಾಧ್ಯ. ಪ್ರಸಕ್ತ ಸಮಾಜದಲ್ಲಿ ಬಹುತೇಕರ 'ಮಾತುಗಳು ಮೈಲುದ್ದ, ಆಚರಣೆ ಚೋಟುದ್ದ' ಎಂಬAತಾಗಿದೆ.
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲಾ ವರ್ಗಗಳ ವಚನಕಾರರ ಕಾಯಕ ಸಮಾಜವನ್ನು ನಿರ್ಮಾಣ ಮಾಡಿದರು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಸುಮಾರು 350ಕ್ಕೂ ಹೆಚ್ಚು ವಚನಕಾರರು ಬಂದರು. ಅವರೆಲ್ಲರೂ ಅವರವರ ಕಾಯಕಕ್ಕೆ ಅನುಗುಣವಾಗಿ ವಚನಗಳನ್ನು ರಚಿಸಿ, ವಿಶ್ವ ಸಾಹಿತ್ಯಕ್ಕೆ ಸಮರ್ಪಿಸಿದ್ದಾರೆ. ಸರಳವಾದ, ತಿಳಿಯಾದ, ಸುಲಲಿತವಾದ ಭಾಷೆಯಲ್ಲಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಇವರೆಲ್ಲರೂ ವಚನಗಳನ್ನು ಸಮಾಜಕ್ಕೆ ಕೊಟ್ಟರು ಎಂದರು.
ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮಿ ಮಾತನಾಡಿ, ಬಸವಣ್ಣನವರಂಥ ಪರಮಜ್ಞಾನಿಗಳ ವಚನಗಳನ್ನು ಕೇಳಿ ಪಾಲಿಸಿದರೆ ಅವರ ಬದುಕು ಹಸನಾಗುತ್ತದೆ. ಮೌಲ್ಯಯುತವಾದ ವಚನ ಸಾಹಿತ್ಯವನ್ನು ಬಾಲ್ಯದಿಂದಲೇ ಮಕ್ಕಳಿಗೆ ಬೋಧಿಸುವ ಕೆಲಸವಾಗಬೇಕು. ಇದರಲ್ಲಿ ಪೋಷಕರ ಪಾತ್ರ ಪ್ರಮುಖವಾಗುತ್ತದೆ ಎಂದು ಹೇಳಿದರು.
ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಚಿಲುಮೆ ಮಠದ ಪರಮಪೂಜ್ಯ ಸ್ವಾಮೀಜಿ, ಅ.ಭಾ.ವೀ.ಲಿಂ. ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಪೊಲೀಸ್ ಅಧಿಕಾರಿ ಆರ್. ವಿ. ಗಂಗಾಧರಪ್ಪ ಮಾತನಾಡಿದರು.
ಅ.ಭಾ.ವೀ.ಲಿಂ. ಮಹಾಸಭಾದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಎಂ.ಎಸ್. ಶಿವಾನಂದ, ಕೆ.ಎನ್. ವಸಂತ್, ಎಸ್. ನಂದೀಶ್, ಯು. ಎಂ. ಬಸವರಾಜ್, ಆದರ್ಶ್, ಎನ್. ಎಂ. ರಾಜೇಶ್, ರುದ್ರ ಪ್ರಸನ್ನ, ದೀಪಿಕಾ ಕರುಣ್, ಕಮಲ ಉದಯಕುಮಾರ್, ಎಂ.ಕೆ. ಧನರಾಜ್, ಸುಶೀಲಮ್ಮ ಬಸವರಾಜ್, ಎಂ.ವಿ. ಹರೀಶ್, ಬಿ.ಬಿ. ಲೋಕೇಶ್, ಅಜಿತ್, ವಿಜಯ ಪಾಲಾಕ್ಷ, ಸರೋಜಾರಾಧ್ಯ ಶಿಕ್ಷಕಿ ಎಚ್.ಎಸ್. ಉಮಾದೇವಿ, ಟಿ.ವಿ.ಶೈಲಾ, ಬಿ.ಬಿ. ಹೇಮಲತಾ, ವಿದ್ಯಾ ಅಜಿತ್ ಇದ್ದರು.