ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠ ವೀರಶೈವ ಸಂಟನಾ ಸಮಿತಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಅಂಗವಾಗಿ ಬುಧವಾರ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಅಶ್ವಾರೂಢ ಭವ್ಯ ಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಭಕ್ತರ ಜಯಘೋಷಗಳ ಮಧ್ಯೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ರಾಯನಾಳ ವಿರಕ್ತ ಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ, ಉತ್ಸವ ಸಮಿತಿ ಅಧ್ಯಕ್ಷೆ ಗಿರೀಜಾ ಹೂಗಾರ, ಸದಾನಂದ ಡಂಗನವರ, ವೀರೇಶ ನೀರಲಗಿ, ರವಿ ಬಡ್ನಿ, ಅಜ್ಜಪ್ಪ ಬೆಂಡಿಗೇರಿ, ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ನಾಗರಾಜ ಕೊಟಗಿ, ಚನ್ನಬಸಪ್ಪ ಧಾರವಾಡಶೆಟ್ರ ಇತರರು ಉಪಸ್ಥಿತರಿದ್ದರು.
ಮೂರುಸಾವಿರ ಮಠದಿಂದ ಹೊರಟ ಮೆರವಣಿಗೆಯು ದಾಜಿಬಾನಪೇಟ, ಮೇದಾರ ಓಣಿ, ದುರ್ಗದಬೈಲ್, ಬ್ರಾಡವೇ, ಬೆಳಗಾವಿ ಗಲ್ಲಿ, ಮಹಾವೀರ ಗಲ್ಲಿ ಮೂಲಕ ಸಾಗಿ ಶ್ರೀಮಠಕ್ಕೆ ವಾಪಸ್ ಬಂದಿತು.
ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಮೆರಗು ತಂದವು. ಡೊಳ್ಳಿನ ಮೇಳ, ಜಗ್ಗಲಿಗೆ, ಭಜನಾ ಮೇಳ, ಕರಡಿ ಮಜಲು, ವಿವಿಧ ವೇಷಭೂಷಣದಲ್ಲಿ ಮಿಂಚಿದ ಬಾಲಕ, ಬಾಲಕಿಯರು, ನೂರಾರು ಭಕ್ತರು, ಅಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯುದ್ದಕ್ಕೂ ಸಾಗಿದರು.
ಡಿಜೆ ಅಬ್ಬರಕ್ಕೆ ಅನೇಕ ಭಕ್ತರು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.