ಜಿಲ್ಲೆ

ಕೆಪಿಎಸ್ ಮಕ್ಕಳಿಗೆ ಬಿಸಿಯೂಟ ಸ್ಥಗಿತ: ಬಸರಾಳು ಶಾಲೆಯಲ್ಲಿ ಮುಂದುವರಿದ ಅಧ್ವಾನ

reportermys

ಮಂಡ್ಯ: ಕಳಪೆ ಆಹಾರ ಪದಾರ್ಥದ ಬಿಸಿಯೂಟವನ್ನು ಮಕ್ಕಳಿಗೆ ಕೊಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ತಾಲೂಕಿನ ಬಸರಾಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಅಧ್ವಾನ ಮುಂದುವರಿದಿದೆ. ಬಿಸಿಯೂಟ ಗದ್ದಲ ಮುಗಿದ ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ.

ಮೂರು ತಿಂಗಳಿನಿಂದ ಕಳಪೆ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಪಾಲಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಪರಿಣಾಮ ಒಬ್ಬ ಶಿಕ್ಷಕ ಹಾಗೂ ನಾಲ್ವರು ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇದರಿಂದಾಗಿ ಬಿಸಿಯೂಟಕ್ಕೆ ಅಡುಗೆ ಮಾಡಲು ಜನರಿಲ್ಲದಂತಾಗಿದೆ.

ಮನೆಯಿಂದ ಬುತ್ತಿ: ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ ಹತ್ತನೇ ತರಗತಿವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಶಾಸಕ ಎಂ.ಶ್ರೀನಿವಾಸ್ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಬಿಸಿಯೂಟದ ಗದ್ದಲದ ಬಳಿಕ ಶಾಲೆಯ ವಾತಾವರಣ ಬದಲಾಗಿದೆ. ಮಕ್ಕಳಿಗೆ ಊಟ ಸಿಗುತ್ತಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, ಎಂತಹ ಪರಿಸ್ಥಿತಿ ಬಂದರೂ ಶಾಲೆಗೆ ಬಂದ ಮಕ್ಕಳಿಗೆ ಬಿಸಿಯೂಟ ನಿಲ್ಲಬಾರದು. ಅಡುಗೆ ಸಿಬ್ಬಂದಿ ಬಾರದಿದ್ದರೂ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಬೇಕೆನ್ನುವುದು ಸರ್ಕಾರದ ಸೂಚನೆ. ಆದರೆ ಸಿಬ್ಬಂದಿ ಇಲ್ಲ ಎನ್ನುವ ನೆಪಮಾಡಿ ಬಿಸಿಯೂಟಕ್ಕೆ ಕತ್ತರಿ ಹಾಕಲಾಗಿದೆ. ಇತ್ತ ವಿಧಿಯಿಲ್ಲದೆ ಪಾಲಕರು ಮಕ್ಕಳಿಗೆ ಮನೆಯಿಂದಲೇ ಬುತ್ತಿ ಕಳುಹಿಸುತ್ತಿದ್ದಾರೆ. ಕೆಲ ಮಕ್ಕಳು ಹೋಟೆಲ್‌ನಿಂದ ತಂದು ತಿನ್ನುತ್ತಿದ್ದಾರೆ.

ಕೆಪಿಎಸ್ ಶಾಲೆಯಲ್ಲಿ ಎರಡು ವಿಭಾಗದಲ್ಲಿ ಅಡುಗೆ ಮಾಡಲಾಗುತ್ತಿದೆ. ಅದರಂತೆ 9 ಮತ್ತು 10ನೇ ತರಗತಿವರೆಗೆ ಬಿಸಿಯೂಟ ಎಂದಿನಂತೆ ನಡೆಯುತ್ತಿದೆ. ಆದರೆ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಬಿಸಿಯೂಟ ಕೊಡುತ್ತಿಲ್ಲ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಈಗಷ್ಟೇ ವಿವಾದದಿಂದ ಕಂಗೆಟ್ಟಿರುವ ಕೆಪಿಎಸ್ ಶಾಲೆಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ದುರಂತ.

ಡಿಡಿಪಿಐ ಎಸ್.ಟಿ.ಜವರೇಗೌಡ ಪ್ರತಿಕ್ರಿಯಿಸಿ, ಗುರುವಾರ (ಸೆ.22)ದವರೆಗೆ ಬಿಸಿಯೂಟ ನೀಡಲಾಗಿದೆ. ಶುಕ್ರವಾರ ಮಾತ್ರ ಮಕ್ಕಳೇ ಊಟ ತಂದಿದ್ದಾರೆಂದು ಕೊಟ್ಟಿಲ್ಲ. ಪ್ರಕರಣದ ಬಳಿಕ ಬಿಸಿಯೂಟದ ನಿರ್ವಹಣೆಯನ್ನು ಪ್ರೌಢಶಾಲೆಗೆ ವಹಿಸಲಾಗಿದೆ ಎಂದರು.