ಜಿಲ್ಲೆ

3 ಚಿನ್ನದ ಪದಕದೊಂದಿಗೆ ಪ್ರಥಮ ರಾಂಕ್ ಪಡೆದ ಬಾರ್ಶಿ ಸ್ವಾಮೀಜಿ; ಕಾಶಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಕಟ

ವಾರಾಣಸಿ : ಬಾರ್ಶಿ ದಹಿವಡಕರ ಮಠದ ಶ್ರೀ ಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮಿಗಳು ಕಾಶಿ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಶಕ್ತಿ ವಿಶಿಷ್ಟಾದ್ವೈತ ವೇದಾಂತ ಆಚಾರ್ಯ ಪರೀಕ್ಷೆಯಲ್ಲಿ 3 ಚಿನ್ನದ ಪದಕಗಳೊಂದಿಗೆ ಪ್ರಥಮ ರ‌್ಯಾಂಕ್ ಪಡೆಯುವ ಮೂಲಕ ವೀರಶೈವ ಶಿವಾಚಾರ್ಯ ಪರಂಪರೆಯಲ್ಲಿ ಮಹತ್ವದ ದಾಖಲೆ ಬರೆದಿದ್ದಾರೆ.

ಈ ಹಿಂದೆ ಕಾಶೀ ಜಗದ್ಗುರುಗಳು 1973ರಲ್ಲಿ ಇದೇ ವಿವಿಯ ಶಾಂಕರ ವೇದಾಂತಾಚಾರ್ಯ ಪರೀಕ್ಷೆಯಲ್ಲಿ 3 ಚಿನ್ನದ ಪದಕದೊಂದಿಗೆ ಪ್ರಥಮ ರ‌್ಯಾಂಕ್ ಪಡೆದಿದ್ದರು. 1984ರಲ್ಲಿ ಸ್ಥಾಪನೆಯಾದ ಶಕ್ತಿ ವಿಶಿಷ್ಟಾದ್ವೆತ ವೇದಾಂತ ವಿಭಾಗದಲ್ಲಿ 1996ರಲ್ಲಿ ಇಂದಿನ ಶ್ರೀಶೈಲ ಜಗದ್ಗುರುಗಳು ಪ್ರಥಮ ಬಾರಿಗೆ 2 ಚಿನ್ನದ ಪದಕದೊಂದಿಗೆ ಪ್ರಥಮ ರ‌್ಯಾಂಕ್ ಗಳಿಸಿದ್ದರು. ಆ ನಂತರ 3 ದಶಕಗಳ ಬಳಿಕೆ ಬಾರ್ಶಿ ಶ್ರೀಗಳು ಈ ಸಾಧನೆ ಗೈದಿದ್ದಾರೆ. ಈ ಮೂವರು ಸಾಧಕರು ಕೂಡಾ ಕಾಶೀ ಪೀಠದ ಪ್ರಾಚೀನ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ. ಶ್ರೀ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಶ್ರೀಶೈಲದ ವೀರಶೈವ ಗುರುಕುಲದಲ್ಲಿ ತಮ್ಮ ಮೊದಲ ಅಧ್ಯಯನವನ್ನು ಮಾಡಿದ್ದಾರೆ. 

ಪ್ರಥಮ ರ‌್ಯಾಂಕ್ ಪಡೆದಿರುವ ಶ್ರೀಗಳಿಗೆ ಸಂಪೂರ್ಣಾನಂದ ಸುವರ್ಣಪದಕ, ಸ್ವಾಮಿ ಮಾಧವಾಚಾರ್ಯ ಸುವರ್ಣ ಪದಕ ಮತ್ತು ಅನ್ನದಾಪ್ರಸಾದ ಮುಖರ್ಜಿ ಸುವರ್ಣಪದಕವನ್ನು ಅ.8ರಂದು ನಡೆಯುವ ಘಟಿಕೋತ್ಸವದಲ್ಲಿ ಪ್ರದಾನ ಮಾಡುವುದಾಗಿ ವಿವಿ ಪ್ರಕಟಣೆ ತಿಳಿಸಿದೆ.

ಶ್ರೀಗಳ ಸಾಧನೆಗೆ ಜಗದ್ಗುರು ಪಂಚಪೀಠಾಧೀಶ್ವರರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ.