ಅನ್ಸಾರ್ ಇನೋಳಿ ಉಳ್ಳಾಲ
ಆರಂಭದಲ್ಲಿ ಗುರುತಿಸಿದ ಜಮೀನು ಅಧ್ಯಕ್ಷರೇ ಬೇಡ ಎಂದರು. ಎರಡನೇ ಬಾರಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಅಡ್ಡಿ. ಮೂರನೇ ಬಾರಿ ಶಿಲಾನ್ಯಾಸ ನಡೆದರೂ ಕೆಲಸಕ್ಕೆ ಅಡ್ಡಿಯಾದ ಬಿಜೆಪಿ. ಈಗ ನಾಲ್ಕನೇ ಬಾರಿ ಜಮೀನು ಫಿಕ್ಸ್ ಆಗಿದ್ದು ಶೀಘ್ರ ಕಾಮಗಾರಿ ಆರಂಭದ ನಿರೀಕ್ಷೆ. ಇದು ಬ್ಯಾರಿ ಭವನದ ಕಥೆಯಲ್ಲ... ವ್ಯಥೆ!
ಸರ್ಕಾರದ ಅಧೀನದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಗೊಂದು ಸ್ವಂತ ಕಟ್ಟಡ ಬೇಕೆನ್ನುವ ಕನಸು ಹಿಂದಿನಿಂದಲೂ ಇತ್ತು. ಅಕಾಡೆಮಿ ಆರಂಭಗೊಂಡ ಬಳಿಕ 2009ರಿಂದ ಇದುವರೆಗೆ ಹಾಲಿ ಅಧ್ಯಕ್ಷರ ಸಹಿತ ಐವರು ಅಧ್ಯಕ್ಷರು ಅಧಿಕಾರ ನಡೆಸಿದ್ದಾರೆ. ಆದರೆ ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಈ ತಿಂಗಳಾಂತ್ಯಕ್ಕೆ ಅಕಾಡೆಮಿಗೆ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಈ ಮೂಲಕ ಬ್ಯಾರಿ ಸಮುದಾಯದ ಬಹುವರ್ಷಗಳ ಕನಸು ನನಸಾಗುವ ಹಂತಕ್ಕೆ ತಲುಪಿದೆ.
ಬ್ಯಾರಿ ಭವನದ ಹಿನ್ನೆಲೆ: ತುಳು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಇರುವಂತೆ ಬ್ಯಾರಿ ಸಾಹಿತ್ಯ ಅಕಾಡೆಮಿಗೂ ಸ್ವಂತ ಕಟ್ಟಡ ಬೇಕೆನ್ನುವ ನೆಲೆಯಲ್ಲಿ ಹಿಂದಿನ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಬಳಿಕ ಮೂಡಾಕ್ಕೆ 40 ಲಕ್ಷ ರೂ. ಪಾವತಿಸಿ ನೀರುಮಾರ್ಗದ ಬೈತುರ್ಲಿಯಲ್ಲಿ 25 ಸೆಂಟ್ಸ್ ಜಮೀನು ಖರೀದಿಸಿ ಬ್ಯಾರಿ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಅಲ್ಲಿ ಬ್ಯಾರಿ ಭಾಷಿಕರ ಸಂಖ್ಯೆ ವಿರಳವಾಗಿದೆ. ಈ ನಿಟ್ಟಿನಲ್ಲಿ ತುಳು, ಕೊಂಕಣಿ ಹಾಗೂ ಇತರ ಅಕಾಡೆಮಿಗಳಿಗೆ ಸರ್ಕಾರದಿಂದ ಉಚಿತ ಜಮೀನು ನೀಡಿದಂತೆ ಬ್ಯಾರಿ ಅಕಾಡೆಮಿಗೂ ನೀಡಬೇಕೆಂದು ಮನವಿಯನ್ನು ನಂತರದ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದನೆಯಾಗಿ ತೊಕ್ಕೊಟ್ಟು ಬಸ್ ತಂಗುದಾಣದ ಬಳಿ ಸುಮಾರು 3 ಕೋಟಿ ರೂ. ಮೌಲ್ಯದ 25 ಸೆಂಟ್ಸ್ ಜಮೀನು ಮಂಜೂರಾಗಿತ್ತು.
ವೈಶಿಷ್ಟೃಗಳ ಭವನ
ಆರಂಭದಲ್ಲಿ ಬ್ಯಾರಿ ಭವನಕ್ಕೆ ಸರ್ಕಾರ 3 ಕೋಟಿ ರೂ. ಮಂಜೂರುಗೊಳಿಸಿದ್ದರೆ, ನಂತರ 6ಕ್ಕೇರಿತ್ತು. ಇದೀಗ 18 ಕೋಟಿ ರೂ. ಯೋಜನೆ ರೂಪಿಸಲಾಗಿದ್ದರೂ ಮೊದಲ ಹಂತದಲ್ಲಿ 9.95 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಅಂತಾರಾಷ್ಟ್ರೀಯಮಟ್ಟದ ಭವನ ನಿರ್ಮಾಣಕ್ಕೆ ಅಕಾಡೆಮಿಯ ಅಧ್ಯಕ್ಷರು ಮುಂದಾಗಿ ಅನುಭವಿಗಳಿಂದಲೇ ಕಟ್ಟಡ ವಿನ್ಯಾಸ ಮಾಡಿಸಿದ್ದಾರೆ. ಈ ಭವನದ ತಳಅಂತಸ್ತಿನಲ್ಲಿ ವಾಹನ ನಿಲುಗಡೆ ಸ್ಥಳದಲ್ಲೇ ನೂರು ಜನ ಭಾಗವಹಿಸುವಂತಹ ಕಾರ್ಯಕ್ರಮಗಳಿಗೆ ಅನುಕೂಲ ಆಗುವ ಸಭಾಂಗಣ ಇರಲಿದೆ. ಇಲ್ಲಿ ಅಗತ್ಯಕ್ಕೆ ತಕ್ಕಂತೆ ಪೂರ್ಣ ಜಾಗವನ್ನು ಸಭಾಂಗಣವನ್ನಾಗಿ ಅಥವಾ ಇಡಿ ಜಾಗ ವಾಹನ ನಿಲುಗಡೆಗೆ ಬಳಸಬಹುದಾಗಿದೆ.
ನೆಲಅಂತಸ್ತಿನಲ್ಲಿ ಮ್ಯೂಸಿಯಂ, ಗ್ರಂಥಾಲಯ, ಓದುವ ಕೋಣೆ, ಅಕಾಡೆಮಿ ಕಚೇರಿ, ಸಭೆ ನಡೆಸುವ ಕೋಣೆ, ಕ್ಯಾಬಿನ್, ಸಂಶೋಧನಾ ಕೊಠಡಿ ಹಾಗೂ ಎರಡು ವಾಣಿಜ್ಯ ಕೋಣೆಗಳು ಇರಲಿವೆ. ಪ್ರಥಮ ಅಂತಸ್ತಿನಲ್ಲಿ ಶಾಶ್ವತ ಕುರ್ಚಿ ಅಳವಡಿಸಿದ ಸಭಾಂಗಣ ಹಾಗೂ ಎರಡನೇ ಅಂತಸ್ತಿನಲ್ಲಿ ಕುರ್ಚಿ ಅಳವಡಿಸದೆ ಕಾರ್ಯಾಗಾರ ಅಥವಾ ಇತರ ಕಾರ್ಯಕ್ರಮದ ಅನುಕೂಲಕ್ಕಾಗಿ ಸಭಾಂಗಣ, ಮೂರನೇ ಅಂತಸ್ತಿನಲ್ಲೂ ಶೀಟ್ ಅಳವಡಿಸಿದ ಸಭಾಂಗಣ ಇರಲಿದೆ. ಆಹಾರ ಸಾಗಾಟಕ್ಕೆ ಹಾಗೂ ಸಾರ್ವಜನಿಕರ ಬಳಕೆಗಾಗಿ ಎರಡು ಲಿಫ್ಟ್‌ಗಳು ಇರಲಿವೆ.
ಎಲ್ಲಿ ಹೋದರೂ ವಿರೋಧ
ಅಕಾಡೆಮಿಯ ಹಿಂದಿನ ಅಧ್ಯಕ್ಷರ ಆಶಯದಂತೆ ಐದು ವರ್ಷಗಳ ಹಿಂದೆಯೇ ಬ್ಯಾರಿ ಭವನದ ಜಮೀನು ಬೈತುರ್ಲಿಯಿಂದ ತೊಕ್ಕೊಟ್ಟಿಗೆ ಜಂಪ್ ಹೊಡೆದಿತ್ತು. ಆದರೆ, ತೊಕ್ಕೊಟ್ಟಿನಲ್ಲೂ ಅಬ್ಬಕ್ಕ ಉತ್ಸವ ಸಮಿತಿ ಮತ್ತು ಬಿಜೆಪಿ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಮತ್ತೆ ಜಮೀನಿನ ಹುಡುಕಾಟ ನಡೆದು ಕೊನೆಗೂ ಅಸೈಗೋಳಿಯಲ್ಲಿ ಫಿಕ್ಸ್ ಆಗಿದೆ.
ನಡೆದಿತ್ತು ಹಲವು ಪ್ರಹಸನ
ಬ್ಯಾರಿ ಭವನಕ್ಕೆ ಶೀಘ್ರ ಶಿಲಾನ್ಯಾಸ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಈ ಬಾರಿ ನಿರೀಕ್ಷೆಯಂತೆ ಯಶಸ್ಸು ಕಂಡರೆ ಶಿಲಾನ್ಯಾಸ ಇತಿಹಾಸ ಪುಟ ಸೇರಲಿದೆ. ಐದು ವರ್ಷಗಳ ಹಿಂದೆಯೇ ತೊಕ್ಕೊಟ್ಟಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಅಂದು ಅಬ್ಬಕ್ಕ ಉತ್ಸವ ಸಮಿತಿಯ ವಿರೋಧದಿಂದ ಕಾರ್ಯಕ್ರಮ ರದ್ದಾಗಿತ್ತು. ಅದಾದ ಬಳಿಕ ಯಾರಿಗೂ ಮಾಹಿತಿ ನೀಡದೆ ಶಿಲಾನ್ಯಾಸ ನಡೆಸಿ ಬಾವಿ ನಿರ್ಮಾಣಕ್ಕೆ ಮುಂದಾದ ಸಂದರ್ಭ ಸಂಘಟನೆಯೊಂದು ಕಾರ್ಮಿಕರನ್ನೇ ಹಿಂದಕ್ಕೆ ಕಳಿಸಿತ್ತು. 2022ರ ಫೆಬ್ರವರಿ 26ರಂದು ಬಿಜೆಪಿ ಮುಖಂಡರ ಧರಣಿ ನಡುವೆಯೇ ಶಿಲಾನ್ಯಾಸ ನಡೆದಿತ್ತು. ಆದರೆ ಕಾಮಗಾರಿ ನಡೆಸಲು ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತೊಕ್ಕೊಟ್ಟಿನ ಜಾಗವನ್ನೇ ಕೈಬಿಡಲಾಗಿತ್ತು.
ಬ್ಯಾರಿ ಸಮುದಾಯದ ಹಲವು ವರ್ಷಗಳ ಬೇಡಿಕೆ ಮತ್ತು ಕನಸು ನನಸಾಗುವ ಹಂತದಲ್ಲಿದೆ. ಈ ಭವನದಲ್ಲಿ ಸಂಶೋಧನಾರ್ಥಿಗಳಿಗಾಗಿ ಅಂತಾರಾಷ್ಟ್ರೀಯಮಟ್ಟದ ಮ್ಯೂಸಿಯಂ ನಿರ್ಮಿಸಬೇಕಿದೆ. ಬ್ಯಾರಿ ಭಾಷೆ, ಸಂಸ್ಕೃತಿ ಬಗ್ಗೆ ಅಧ್ಯಯನ ಇಲ್ಲೇ ನಡೆಯಬೇಕಿರುವುದರಿಂದ ಅಂತಾರಾಷ್ಟ್ರೀಯಮಟ್ಟದ ಭವನ ಅಗತ್ಯ. ವಿವಿಧ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಉಮರ್ ಯು.ಎಚ್. ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ ಸಮುದಾಯ ದೇಶ, ವಿದೇಶದಲ್ಲೂ ಪ್ರಬಲವಾಗಿ ಗುರುತಿಸಿಕೊಂಡಿದೆ. ಅಕಾಡೆಮಿಯಿಂದಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಪ್ರಯತ್ನ ನಡೆಯುತ್ತಿದ್ದು ಇನ್ನಷ್ಟು ಅಧ್ಯಯನಕ್ಕೆ ಪೂರಕ ವ್ಯವಸ್ಥೆ ಆಗಬೇಕು. ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣವಾಗಬೇಕೆನ್ನುವುದು ಎಲ್ಲರ ಕನಸಾಗಿದ್ದು ಉಳ್ಳಾಲ ತಾಲೂಕಿನಲ್ಲೇ ಜಮೀನು ಗುರುತಿಸಿರುವುದು ಸಂಸತ ತಂದಿದೆ. ಇಬ್ರಾಹಿಂ ತಪ್ಷಿಯಾ ನಡುಪದವು ಅಧ್ಯಕ್ಷ, ಮೇಲ್ತೆನೆ