ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನದಿಗೆ ನೀರು ಬಿಟ್ಟ ವೇಳೆ ನಗುವನ ತೋಟದ ತಡೆಗೋಡೆ ಕುಸಿದಿದೆ. ಇತ್ತೀಚೆಗಷ್ಟೇ ಪುನಶ್ಚೇತನಗೊಂಡಿದ್ದ ತಡೆಗೋಡೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಗುವನದ ಎದುರು ಅಣೆಕಟ್ಟೆ ಗೇಟ್ ತೆಗೆದು ನೀರು ಬಿಟ್ಟ ಹಿನ್ನೆಲೆಯಲ್ಲಿ ಹಲವು ತಾಸಿನ ಬಳಿಕ ತಡೆಗೋಡೆ ಕುಸಿದಿದೆ. ಈ ವೇಳೆ ನೀರನ್ನು ನಿಲ್ಲಿಸದಿದ್ದರೆ ಭಾಗಶಃ ಕೊಚ್ಚಿ ಹೋಗುತ್ತಿತ್ತು ಎನ್ನುವ ಸ್ಥಳೀಯರ ಮಾಹಿತಿ. ಮಾತ್ರವಲ್ಲದೆ ಕಳಪೆ ಕಾಮಗಾರಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಅವಘಡ ಸಂಭವಿಸಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.