ಮಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಪರಿಣಾಮ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವಡೆ ಮೇ 24ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಂಡಮಾನ್ ಹಾಗೂ ಕೇರಳಕ್ಕೆ ಅವಧಿಗೆ ಮುನ್ನವೇ ಮುಂಗಾರು ಆಗಮಿಸುವ ವರದಿಗಳಿದ್ದರೂ ಆರಂಭಿಕ ದುರ್ಬಲತೆ ಇದ್ದರೆ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗಬಹುದು. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣ ಇದ್ದು, ಉತ್ತಮ ಮಳೆಯ ಮುನ್ಸೂಚನೆ ಕಂಡುಬಂದಿದೆ. ಕರಾವಳಿ ಹಾಗೂ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಾಗಿದ್ದುದರಿಂದ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ ಎಂದು ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.
*ಕರಾವಳಿಯಲ್ಲಿ ಮಳೆ
ಕರಾವಳಿಯ ಮಂಗಳೂರು ಸಹಿತ ಗ್ರಾಮೀಣ ಭಾಗವಾದ ಸಂಪಾಜೆ, ಸುಳ್ಯ, ಕೊಕ್ಕಡ ಸೇರಿದಂತೆ ಹಲವಡೆ ಸೋಮವಾರ ಬೆಳಗ್ಗೆ ಮಳೆಯಾಗಿದ್ದು, ನಂತರ ಮಧ್ಯಾಹ್ನ ವರೆಗೆ ಮೋಡಕವಿದ ವಾತಾವರಣ ಸಹಿತ ಒಣಹವೆ ಮುಂದುವರಿದಿದೆ. ಸಂಜೆ ವೇಳೆ ಹಲವಡೆ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಸೇರಿದಂತೆ ಜಿಲ್ಲೆಯ ಹಲವಡೆ ಸಾಯಂಕಾಲ ಸಾದಾರಣಕ್ಕಿಂತ ಉತ್ತಮ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಗುಡುಗು ಸಹಿತ ಹನಿ ಮಳೆ ಇತ್ತು. ಕೊಕ್ಕಡ ನೆಲ್ಯಾಡಿ ಭಾಗದಲ್ಲಿ ಬೆಳಗ್ಗೆ 15 ನಿಮಿಷಗಳ ಕಾಲ ಸಾಧಾರಣ ಮಳೆ, ಸಂಜೆ ಕೊಕ್ಕಡ ನೆಲ್ಯಾಡಿ ಭಾಗದಲ್ಲಿ ಕಾರ್ಮೋಡ ಇತ್ತು. ಶಿಶಿಲ ಭಾಗದಲ್ಲಿ ಸಾಧಾರಣ ಮಳೆ ಸುರಿದಿತ್ತು.
*ಉಷ್ಣಾಂಶದಲ್ಲಿ ಇಳಿಕೆ
ಕಳೆದ 3 ತಿಂಗಳಿನಿಂದ ಕರಾವಳಿಯ ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದು, ಸೋಮವಾರ 3 ತಿಂಗಳ ಬಳಿಕ 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಸೋಮವಾರ ಸರಾಸರಿ 29.6 ಡಿಗ್ರಿ ಗರಿಷ್ಠ, 23.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ರಾತ್ರಿ 22.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಪೂರ್ತಿ ಒಣ ಚಳಿ ಮುಂದುವರಿದಿತ್ತು. ಬೆಳಗ್ಗೆ ಕೆಲವು ಹೊತ್ತು ಮಳೆ ಕಾಡು ಹಾಗೂ ಪಶ್ಚಿಮಘಟ್ಟದ ಹಲವಡೆ ಹೆಚ್ಚಿನ ಪ್ರಮಾಣದ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಮಳೆಯಾಗಿಲ್ಲ.