ಜಿಲ್ಲೆ

ಪಾರ್ಟಿ ಮಾಡಲು ಕರೆದು ಬರ್ಬರ ಕೊಲೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ : ರೈಲ್ವೆಗೊಲ್ಲಹಳ್ಳಿ ಬಳಿ ಪ್ರೀತಿಯ ವಿಚಾರಕ್ಕೆ ಜಗಳವಾಗಿದ್ದು, ಯುವತಿಯ ಹಳೇ ಪ್ರಿಯಕರ ಹೊಸ ಪ್ರಿಯಕರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಗ್ರಾಮದ ನಿವಾಸಿ ದರ್ಶನ್​ (24) ಕೊಲೆಯಾದವನು, ಹಳೇ ಪ್ರಿಯಕರ ವೇಣುಗೋಪಾಲ್​ (27) ಕೊಲೆ ಆರೋಪಿ.

ನಗರದ ಖಾಸಗಿ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್​ ಶುಕ್ರವಾರ ಸಂಜೆ 6 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದು, ಬಳಿಕ ರಾತ್ರಿ 9ಗಂಟೆಗೆ ಅದೇ ಗ್ರಾಮದ ವೇಣುಗೋಪಾಲ್​ ಪಾರ್ಟಿ ಮಾಡುವುದಾಗಿ ಹೇಳಿ ಗ್ರಾಮದ ಹೊರವಲಯದಲ್ಲಿರುವ ದರ್ಶನ್​ ಜಮೀನಿನ ಬಳಿ ಕರೆಸಿಕೊಂಡಿದ್ದಾನೆ. ದರ್ಶನ್​, ವೇಣುಗೋಪಾಲ್​ ಸೇರಿ ಕೆಲ ಸ್ನೇಹಿತರು ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ವೇಣುಗೋಪಾಲ್​ ತಾನು ಪ್ರೀತಿಸಿದ್ದ ಹುಡುಗಿಯನ್ನು ನೀನು ಪ್ರೀತಿ ಮಾಡುತ್ತಿದ್ದೀಯಾ ಎಂದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಅದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೋಪಗೊಂಡ ವೇಣುಗೋಪಾಲ್​ ದರ್ಶನ್​ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ದರ್ಶನ್​ ಜಗಳದ ವಿಷಯವನ್ನು ಪ್ರೇಯಸಿಗೆ ರೋನ್​ ಮಾಡಿ ತಿಳಿಸಿದ್ದು, ಆಕೆ ದರ್ಶನ್​ ಸಹೋದರನಿಗೆ ಕರೆ ಮಾಡಿ ದರ್ಶನ್​ ಮೇಲಿನ ಹಲ್ಲೆ ಬಗ್ಗೆ ವಿವರಿಸಿದ್ದಾಳೆ. ವಿಚಾರ ತಿಳಿದ ಸಹೋದರ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ದರ್ಶನ್​ ಮೃತಪಟ್ಟಿದ್ದ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಪರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಾಗೇಶ್​ಕುಮಾರ್​, ಡಿವೈಎಸ್​ಪಿ ಜಗದೀಶ್​, ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ನರೇಂದ್ರ ಸ್ಥಳ ಪರಿಶೀಲನೆ ನಡೆಸಿದರು.

ಇಬ್ಬರನ್ನೂ ಪ್ರೀತಿಸಿದ್ದ ಯುವತಿ: ಕಳೆದ 6 ವರ್ಷದ ಹಿಂದೆ ವೇಣುಗೋಪಾಲ್​ ಜತೆ ಅದೇ ಗ್ರಾಮದ ಯುವತಿಯ ಸ್ನೇಹ ಬೆಳೆದು ನಂತರ ಅದು ಪ್ರೇಮವಾಗಿತ್ತು. ಆದರೆ 6 ತಿಂಗಳ ಹಿಂದೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಬಳಿಕ ಯುವತಿ ಅದೇ ಗ್ರಾಮದ ದರ್ಶನ್​ನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ದರ್ಶನ್​ ಸಹೋದರಿಯ ವಿವಾಹ ಬಳಿಕ ಇಬ್ಬರಿಗೂ ಮದುವೆ ಮಾಡಲು ಎರಡೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ಇದೇ ವಿಚಾರವಾಗಿ ಮಾತನಾಡಲು ಹಳೇ ಪ್ರಿಯಕರ ವೇಣುಗೋಪಾಲ್​, ದರ್ಶನ್​ನನ್ನು ಕರೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಯುವತಿಯ ಹಳೇ ಪ್ರೇಮಿ ವೇಣುಗೋಪಾಲ್​ ಎಂಬಾತ ದರ್ಶನ್​ ಎಂಬಾತನನ್ನು ಕೊಲೆ ಮಾಡಿದ್ದಾನೆ. ರಾತ್ರಿ ಅವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆ ವಿಕೋಪಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಯ ಬಗ್ಗೆ ಮಾಹಿತಿ ಇದೆ. ತನಿಖೆಗೆ ತಂಡ ರಚನೆ ಮಾಡಿದ್ದು, ಶ್ರೀದಲ್ಲೇ ಬಂಧನ ಮಾಡಲಾಗುವುದು. | ಸಿ.ಕೆ.ಬಾಬಾ ಬೆಂಗಳೂರು ಗ್ರಾಮಾಂತರ ಎಸ್​ಪಿ