ಜಿಲ್ಲೆ

ಮಗನ ಹುಟ್ಟುಹಬ್ಬದಂದೇ ಬರ್ಬರ ಹತ್ಯೆ

Bellari - Heera Nayak

ಬಳ್ಳಾರಿ : ಮಗನ ಹುಟ್ಟುಹಬ್ಬದಂದೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮೆಹಬೂಬ್ ಬಾಷಾ (40) ಎಂಬಾತನನ್ನು ಬುಧವಾರ ತಡರಾತ್ರಿಯಲ್ಲಿ ಗುಗ್ಗರಹಟ್ಟಿ ಪ್ರದೇಶದಲ್ಲಿ ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ದುಷ್ಕೃತ್ಯ ಎಸಗಿದ್ದ ಕೋಳಿ ಅನ್ವರ್ (48), ಅಲ್ತಾಫ್ ಗೂಡೂಸಾಬ್ (23), ಸಿರಾಜ್ ಬಾಷಾ (25) ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಗನ ಹುಟ್ಟುಹಬ್ಬದಂದು ಸಂಭ್ರಮದಲ್ಲಿದ್ದ ಮೆಹಬೂಬ್ ಬಾಷಾ ಬೇಕರಿಯಿಂದ ಕೇಕ್ ತಂದು ಮನೆಯಲ್ಲಿಟ್ಟು ಹೊರಗಡೆ ಬಂದಿದ್ದ ಈ ವೇಳೆ ಹತ್ಯೆಗೆ ಸಂಚು ರೂಪಿಸಿದ್ದ ಬಂಧಿತರು ಮನೆಯಿಂದ ಸ್ವಲ್ಪ ದೂರದಲ್ಲೇ ರಾತ್ರಿ 7 ಗಂಟೆ ವೇಳೆಗೆ ಚಾಕು, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಮೆಹಬೂಬ್ ಬಾಷಾ ಅವರನ್ನು ವಿಮ್ಸ್‌ನ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಬದುಕುಳಿಯಲಿಲ್ಲ. ರಾತ್ರಿ 9 ಗಂಟೆಗೆ ಮೆಹಬೂಬ್ ಬಾಷಾ ಮೃತಪಟ್ಟಿದ ಬಗ್ಗೆ ವೈದ್ಯರು ಘೋಷಣೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಅನ್ವರ್ ಹಾಗೂ ಮೆಹಬೂಬ್ ಬಾಷಾ ಅವರೊಂದಿಗೆ ಜಗಳಗಳಾಗುತ್ತಿದ್ದವು ಎಂದು ತಿಳಿಸಿದರು.

ಮೃತಪಟ್ಟ ಮೆಹಬೂಬ್ ಬಾಷಾ ಕೆಆರ್‌ಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದ. ಕೋಳಿ ಅನ್ವರ್ ಹಾಗೂ ಸಹಚರರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು ಎನ್ನುವ ವಿಚಾರ ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆ ಮಾಡಲಾಗುವುದು ಎಂದು ಎಸ್‌ಪಿ ಸ್ಪಷ್ಟಪಡಿಸಿದರು.