ಸ್ಥಳ ಪರಿಶೀಲನೆ ನಡೆಸಿದ ಎಸ್​ಪಿ ಕುಶಾಲ್​ ಚೌಕ್ಸೆ, ಎಎಸ್​ಪಿ ರಾಜಾಖಾಸೀಂ ಸಾಬ್​, ಡಿವೈಎಸ್​ಪಿ ಮುರಳೀಧರ್​ ಮತ್ತಿತರರು. 
ಜಿಲ್ಲೆ

ಜೆಸಿಬಿ ಮಾಲೀಕನ ಬರ್ಬರ ಹತ್ಯೆ

ಎನ್.ವೆಂಕಟೇಶ್

ಚಿಂತಾಮಣಿ: ನಗರದ ಆರ್ಯವೈಶ್ಯ ಚಿತಾಗಾರದ ಹಿಂಭಾಗದ ರ್ನಿಜನ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜೆಸಿಬಿ ಮತ್ತು ಟಿಪ್ಪರ್​ ಮಾಲೀಕನನ್ನು ಅಡ್ಡಗಟ್ಟಿದ ಅಪರಿಚಿತ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ತಾಲೂಕಿನ ನಾಗದೇನಹಳ್ಳಿ ನಿವಾಸಿ, ಚಿಂತಾಮಣಿಯ ಅಶ್ವಿನಿ ಬಡಾವಣೆಯಲ್ಲಿ ವಾಸವಿದ್ದ ರಾಮಸ್ವಾಮಿ (35) ಕೊಲೆಯಾದವರು. ಹಲವು ವರ್ಷಗಳಿಂದ ಜೆಸಿಬಿ ಮತ್ತು ಟಿಪ್ಪರ್​ ವಾಹನ ಇಟ್ಟುಕೊಂಡಿದ್ದ ರಾಮಸ್ವಾಮಿ ಗುರುವಾರ ರಾತ್ರಿ ರ್ನಿಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿ ಮಚ್ಚಿನಿಂದ ರಾಮಸ್ವಾಮಿ ಮುಖ ಮತ್ತು ಕೈಗೆ ಹಲ್ಲೆ ಮಾಡಿದ್ದಾನೆ. ಕೈ ತುಂಡಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲ್ಲೆ ವೇಳೆ ನಾಯಿಗಳು ಕಿರುಚುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ದುಷ್ಕರ್ಮಿ ಮಚ್ಚನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಸಿಬಿ ಚಾಲಕನ ಮೇಲೆ ಅನುಮಾನ: ಎಸ್​ಪಿ ಕುಶಾಲ್​ ಚೌಕ್ಸೆ ಮತ್ತು ಎಎಸ್​ಪಿ ರಾಜಾ ಖಾಸೀಂ ಸಾಬ್​, ಡಿವೈಎಸ್​ಪಿ ಮುರಳೀಧರ್​ ಮತ್ತು ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿಕುಮಾರ್​ ಸ್ಥಳ ಪರಿಶೀಲಿಸಿದರು. ರಾಮಸ್ವಾಮಿ ಅವರ ಬಳಿ ಜೆಸಿಬಿ ಚಾಲಕನಾಗಿದ್ದವನ ಮೇಲೆ ಮೃತನ ಕುಟುಂಬದವವರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರ ತಂಡ ಆರೋಪಿ ಪತ್ತೆಗೆ ಮುಂದಾಗಿದೆ ಎಂದು ಕುಶಾಲ್​ ಚೌಕ್ಸೆ ತಿಳಿಸಿದ್ದಾರೆ.

ಶಂಕಿತನ ಮೊಬೈಲ್​ ಸ್ವಿಚ್ಡ್​ ಆ್​:  ಈ ನಡುವೆ ಶಂಕಿತ ಚಾಲಕನ ಮೊಬೈಲ್​ ಸ್ವಿಚ್ಡ್​ ಆ್​ ಆಗಿದೆ. ಶಿಡ್ಲಟ್ಟ ತಾಲೂಕಿನ ಎಚ್​. ಕ್ರಾಸ್​ ಬಳಿ ಇರುವ ಅಮರಾವತಿ ಗ್ರಾಮದ ಜೆಸಿಬಿ ಮಾಲೀಕರೊಬ್ಬರ ಬಳಿ ಕೆಲಸಕ್ಕೆ ಬರುವುದಾಗಿ ಹೇಳಿ ಹಣ ಪಡೆದುಕೊಂಡಿರುವ ಶಂಕಿತ ಚಾಲಕ, ದ್ವಿಚಕ್ರವಾಹನವನ್ನು ಅಮರಾವತಿ ಗ್ರಾಮದಲ್ಲಿಯೇ ಬಿಟ್ಟುಹೋಗಿರುವ ಮಾಹಿತಿ ಲಭಿಸಿದೆ. ನಿಖರ ಕಾರಣ ತಿಳಿಯಲು ತನಿಖೆ ನಡೆಸುತ್ತಿರುವುದಾಗಿ ಎಸ್​ಪಿ ತಿಳಿಸಿದ್ದಾರೆ.