ಜಿಲ್ಲೆ

ಅಗ್ನಿಹೋತ್ರ ಸರ್ವ ರೋಗಕ್ಕೂ ಮದ್ದು

Chitradurga

ಭರಮಸಾಗರ: ಕ್ಯಾನ್ಸರ್, ಕರೊನಾದಂತಹ ಮಾರಣಾಂತಿಕ ಕಾಯಿಲೆ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗ್ನಿಹೋತ್ರ ಸೂಕ್ತ ಮದ್ದು ಎಂದು ಯೋಗಶಿಕ್ಷಕ ತಿಪ್ಪೇಸ್ವಾಮಿ ಹೇಳಿದರು.

ಶಾಂತಲಾ ಮಹಿಳಾ ಮಂಡಳಿ, ಓಂಕಾರ ಯೋಗ ಕೇಂದ್ರ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಕರೊನಾ ವೈರಸ್ ತಡೆ ಜಾಗೃತಿಗಾಗಿ ಇಲ್ಲಿನ ದೊಡ್ಡಪೇಟೆ ಶಿವಯೋಗ ಮಂದಿರದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಅಗ್ನಿಹೋತ್ರ ಹಾಗೂ ಸುದರ್ಶನ ಯೋಗ ಶಿಬಿರದಲ್ಲಿ ಮಾತನಾಡಿದರು.

ಸನಾತನ ಕಾಲದಿಂದಲೂ ರೂಢಿಯಲ್ಲಿರುವ ಅಗ್ನಿಹೋತ್ರ ಸರ್ವ ರೋಗಕ್ಕೂ ಮದ್ದಾಗಿದೆ. ಮನುಕುಲದ ಒಳಿತು, ಪ್ರಾಕೃತಿಕ ವಿಕೋಪ ಪರಿಹಾರಕ್ಕೂ ಇದು ಸಹಕಾರಿಯಾಗಿದೆ ಎಂಬುದು ವಿದೇಶಿ ವಿಜ್ಞಾನಿಗಳು, ಸಂಶೋಧಕರ ಅರಿವಿಗೂ ಬಂದಿದೆ ಎಂದು ತಿಳಿಸಿದರು.

ಸೂರ್ಯೋದಯ, ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಹದಿನೈದು ನಿಮಿಷಗಳಲ್ಲಿ ಇದನ್ನು ಮಾಡಬಹುದು. ಇದರಿಂದ ಮನಸ್ಸು ಶಾಂತವಾಗುತ್ತದೆ. ನರಮಂಡಲವು ಸಚೇತನಗೊಂಡು ದೇಹ ಮತ್ತು ಮನಸ್ಸು ಲವಲವಿಕೆ ಪಡೆದುಕೊಳ್ಳುತ್ತದೆ ಎಂದರು.

ಶಾಂತಲಾ ಮಹಿಳಾ ಮಂಡಳಿ ಕಾರ್ಯದರ್ಶಿ ವೀಣಾ ಶಿವಯೋಗಿ ಮಾತನಾಡಿ, ಅಗ್ನಿಹೋತ್ರದಿಂದ ಪರಿಸರದ ವೈರುಧ್ಯ ನಿವಾರಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪತಂಜಲಿ ಯೋಗ ಸಮಿತಿ, ಓಂಕಾರ ಯೋಗ ಕೇಂದ್ರ, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.