ರಾಮನಗರ : ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಅಬಕಾರಿ ಇಲಾಖೆ ಎಲ್ಲರ ಪಾಲಿನ ಮೆಚ್ಚಿನ ಇಲಾಖೆ. ಈ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬಾರ್‌ಗಳ ಮಾಲೀಕರು ತಮ್ಮದೇ ಸಂಘ ಮಾಡಿಕೊಂಡಿದ್ದಾರೆ. ಕುಡುಕರಿಗೂ ಸಂಘಗಳಿವೆ. ಇತ್ತೀಚೆಗೆ ಅಬಕಾರಿ ಕಾನ್‌ಸ್ಟೆಬಲ್ ಹಿತರಕ್ಷಣಾ ಸಮಿತಿಯೂ ಅಸ್ತಿತ್ವಕ್ಕೆ ಬಂದಿದೆ.
ಆದರೆ, ಪ್ರತಿ ಬಾರ್‌ನ ಯಶಸ್ವಿ ಕಾರ್ಯಾಚರಣೆ ಹಿಂದೆ ದುಡಿಯುತ್ತಿರುವ ಸಾವಿರಾರು ಕಾರ್ಮಿಕರ ಬದುಕು ಮಾತ್ರ ಅತಂತ್ರವಾಗಿದೆ. ಇವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಸದ್ದಿಲ್ಲದ ದುಡಿಮೆ : ಅಬಕಾರಿ ಇಲಾಖೆಯಡಿ ರಾಜ್ಯಾದ್ಯಂತ ಅಂದಾಜು 11 ಸಾವಿರ ವಿವಿಧ ಬಗೆಯ ಪರವಾನಗಿ ಪಡೆದ ಮದ್ಯ ಮಾರಾಟ ಕೇಂದ್ರಗಳಿವೆ. ಇವುಗಳಲ್ಲಿ ೈವ್‌ಸ್ಟಾರ್, ತ್ರಿಸ್ಟಾರ್ ಹೋಟೆಲ್ ಹೊರತುಪಡಿಸಿ, ಉಳಿದಂತೆ ಬಾರ್ ಮತ್ತು ರೆಸ್ಟೋರೆಂಟ್, ವೈನ್ ಶಾಪ್‌ಗಳು, ಔಟ್‌ಲೆಟ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಶ್ರಮ ಮಾತ್ರ ಸದ್ದಿಲ್ಲದ ದುಡಿಮೆಯಾಗಿದೆ. ಪ್ರತಿದಿನ ಬಹುತೇಕ ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳುವ ಇವರ ಕಾಯಕ ರಾತ್ರಿ 11ರವರೆಗೂ ನಡೆಯುತ್ತಿದೆ.
ಜೀವನ ಭದ್ರತೆ ಇಲ್ಲ: ಜೀವನ ನಡೆಸಲು ಯಾವುದೋ ಒಂದು ಹಾದಿ ಎಂದುಕೊಂಡು ಬಂದವರಿಗೆ ಅದೆಷ್ಟೋ ಬಾರ್‌ಗಳು ದಾರಿ ತೋರಿವೆಯಾದರೂ ಜೀವನ ಭದ್ರತೆ ನೀಡಿಲ್ಲ. ಬಾರ್ ಅಥವಾ ಔಟ್‌ಲೆಟ್ ಮಾಲೀಕ ನೀಡುವ ಕಡಿಮೆ ಸಂಬಳಕ್ಕೆ ದುಡಿಯಬೇಕು. ಇನ್ನು ಕುಡಿಯಲು ಬರುವವರು ನೀಡುವ ಅಷ್ಟಿಷ್ಟು ಟಿಫ್ಸ್ ಹಣವೇ ಇವರಿಗೆ ಹೆಚ್ಚುವರಿ ಆದಾಯ. ಆದರೆ ಜೀವನ ನಿರ್ವಹಣೆ ಕಷ್ಟ ಎನ್ನುವ ಪರಿಸ್ಥಿತಿ ಸಿಬ್ಬಂದಿಯದ್ದು. ಸಾಮಾನ್ಯವಾಗಿ ರಜೆ ದಿನಗಳು ಇಲ್ಲವಾದರೂ ಚುನಾವಣೆ, ನಿಷೇಧಾಜ್ಞೆಯಂತಹ ಸಂದರ್ಭದಲ್ಲಿ ಒಣ ದಿನಗಳು ಘೋಷಣೆ ಮಾಡಿದರಷ್ಟೇ ಇವರಿಗೆ ರಜೆ. ಅಂತಹ ರಜೆ ದಿನಗಳಲ್ಲಿ ಮಾಲೀಕ ಸಂಬಳ ನೀಡುವುದು ಅನುಮಾನ. ಅಥವಾ ಊರಿಗೆ ಹೋಗಬೇಕು, ಹುಷಾರಿಲ್ಲ ಎಂದು ರಜೆ ಹಾಕಿದರೂ ಅಂದಿನ ಸಂಬಳ ಕಟ್ ಎನ್ನುವ ಪರಿಸ್ಥಿತಿ ಕಾರ್ಮಿಕರದ್ದು. ಕರೊನಾ ಲಾಕ್‌ಡೌನ್ ಸಂದರ್ಭದಲ್ಲಂತೂ ಇವರ ಪಾಡು ಹೇಳತೀರದ್ದಾಗಿತ್ತು. ಅತ್ತ ಸರ್ಕಾರದಿಂದ ನೆರವೂ ಕೇಳಲಾಗದೆ ಮಾಲೀಕರಿಂದ ನೆರವೂ ದೊರೆಯದೆ ಕಷ್ಟದ ಜೀವನ ನಡೆಸಿದ್ದಾರೆ.
ಮಾಹಿತಿ ಇಲ್ಲ: ಪ್ರತಿ ಬಾರ್‌ಗಳಿಗೆ ಪರವಾನಗಿ ಕೊಡುವ, ನವೀಕರಿಸುವ, ಸರಕು ಪೂರೈಕೆ, ಅಕ್ರಮ ಮಾರಾಟದ ಮೇಲೆ ನಿಗಾ ಇಡುವ ಅಬಕಾರಿ ಇಲಾಖೆಗೆ ಬಾರ್‌ಗಳು ಸೇರಿದಂತೆ ಮದ್ಯ ಮಾರಾಟ ಕೇಂದ್ರದಲ್ಲಿ ಎಷ್ಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಮಾತನಾಡುತ್ತಾರೆ. ಸಿಬ್ಬಂದಿಯ ಜವಾಬ್ದಾರಿ ಬಾರ್ ಮಾಲೀಕರದ್ದು ನಮ್ಮದಲ್ಲ ಎನ್ನುವ ಉತ್ತರ ಕೊಡುತ್ತಾರೆ. ಒಟ್ಟಾರೆಯಾಗಿ ಬೊಕ್ಕಸ ತುಂಬಿಸುವಲ್ಲಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಮಾತ್ರ ಅತಂತ್ರವಾಗಿದ್ದು, ಇವರ ಕಡೆಗೆ ಅಬಕಾರಿ ಇಲಾಖೆ ಗಮನಹರಿಸಬೇಕಿದೆ.
ಬಾರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಹಿತಿ ನಮ್ಮ ಬಳಿಯಿಲ್ಲ. ನಮ್ಮದೇನಿದ್ದರೂ ಮದ್ಯ ಪೂರೈಕೆ, ದಾಸ್ತಾನು ಬಗ್ಗೆ ನಿಗಾವಹಿಸುವುದು ಮತ್ತು ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವಷ್ಟೇ. ಹೆಸರು ಹೇಳಲಿಚ್ಛಿಸದ ಅಬಕಾರಿ ಅಧಿಕಾರಿ ಬಾರ್‌ನಲ್ಲಿ ಕೆಲಸ ಮಾಡಿದರೆ ಕೈ ತುಂಬಾ ಹಣ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ನಮಗೆ ಜೀವನ ಭದ್ರತೆಯೇ ಇಲ್ಲ. ರಜೆ ಹಾಕಿದರೆ ಸಂಬಳ ದೊರೆಯುವುದಿಲ್ಲ. ಬೊಕ್ಕಸಕ್ಕೆ ಹೆಚ್ಚು ಆದಾಯ ಕೊಡುವಲ್ಲಿ ಶ್ರಮವಹಿಸುವ ನಮ್ಮಂತಹ ಕಾರ್ಮಿಕರ ಕಡೆಗೂ ಸರ್ಕಾರ ಗಮನಹರಿಸಬೇಕಿದೆ. ನಂಜುಂಡ, ಬಾರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕ, ರಾಮನಗರ