ದಾವಣಗೆರೆ: ಕಾರ್ಮಿಕರ ದುಡಿಮೆಯ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ಮತ್ತು ಅಭಿವೃದ್ಧಿ ಅವಲಂಬಿತವಾಗಿವೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
ನಗರದ ಪಿಜೆ ಬಡಾವಣೆಯ ವನಿತಾ ಸಮಾಜದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಕಾರ್ಮಿಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಶೇ.70ರಷ್ಟು ಕಾರ್ಮಿಕರು ದುಡಿಮೆಯಲ್ಲಿ ನಿರತರಾಗಿದ್ದಾರೆ. ಅವರಿಗೆ ಸರಿಯಾದ ಸವಲತ್ತುಗಳು ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಐಕ್ಯರಾಗಿ ಹೋರಾಡಬೇಕಿದೆ ಎಂದರು.
ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಕೆಲಸ ಮಾಡುವ ಎಲ್ಲರೂ ಕಾರ್ಮಿಕರಾಗಿದ್ದಾರೆ. ದೇಶಕ್ಕೆ, ಸಮಾಜಕ್ಕೆ, ಜನತೆಗೆ, ದೇಶದ ಅಭಿವೃದ್ಧಿಗೆ ಕಾರ್ಮಿಕರ ತ್ಯಾಗ ಮತ್ತು ಶ್ರಮ ಪರಿಚಯಿಸುವ ಸಲುವಾಗಿ ಕಾರ್ಮಿಕರ ದಿನಾಚರಣೆ ಆಯೋಜಿಸಲಾಗಿದೆ ಎಂದರು.
ದೇಶದಲ್ಲಿ ಶೇ.85ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ.
ಬಡವರು, ಶ್ರೀಮಂತರು ಎನ್ನುವ ಅಸಮಾನತೆ ತೊಲಗಿ, ಚದುರಿ ಹೋಗಿರುವ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕು ಪಡೆಯಬೇಕಿದೆ ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ಸತೀಶ್ ಅರವಿಂದ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿವೆ.
ಇಂದಿನ ದಿನಮಾನಗಳಲ್ಲಿ ಕಾಯಂ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಗುತ್ತಿಗೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ದಿನಮಾನಗಳಲ್ಲಿದ್ದ ಜೀತ ಪದ್ಧತಿ ಆಧುನಿಕವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಲ್ಲ ವರ್ಗದ ಕಾರ್ಮಿಕರು ಚದುರಿ ಹೋಗಿದ್ದು, ತಮ್ಮ ಹೋರಾಟದ ನೆಲೆ ಕಂಡು ಕೊಳ್ಳಬೇಕಾಗಿದೆ. ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಆರೋಗ್ಯಕ್ಕಾಗಿ ಹೋರಾಡುವ ಮೂಲಕ ಬಲಿಷ್ಠರಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದ 12 ಹಿರಿಯ ಕಾರ್ಮಿಕರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಶ್ರಮಿಕ ಶಕ್ತಿಯ ಜಿಲ್ಲಾಧ್ಯಕ್ಷೆ ಪವಿತ್ರ, ಎಸ್.ಕೆ. ಆದಿಲ್ ಖಾನ್, ಅಶ್ಫಕ್ ಅಲಿ ಇತರರಿದ್ದರು.