ಜಿಲ್ಲೆ

ಪೊಲೀಸ್ ಸರ್ವಗಾವಲಿನಲ್ಲಿ ದಸರೆಗೆ ಚಾಲನೆ ನೀಡಿದ ಬಾನು ಮುಸ್ತಾಕ್

ಆರ್.ಕೃಷ್ಣ ಮೈಸೂರು

ಹಿಂದುಪರ ಸಂಘಟನೆಗಳು, ಬಿಜೆಪಿಯ ತೀವ್ರ ವಿರೋಧ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣದಿಂದ ಬಿಗಿ ಬಂದೋಬಸ್ತ್‌ನಲ್ಲಿ ‘ನಾಡಹಬ್ಬ ದಸರಾ’ಕ್ಕೆ ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಸ್ತಾಕ್ ವಿದ್ಯುಕ್ತ ಚಾಲನೆ ನೀಡಿದರು.

ಬಹುತೇಕ ಅಘೋಷಿತ ನಿಷೇಧಾಜ್ಞೆ ಜಾರಿಗೊಂಡಂತೆ ಇದ್ದ ಚಾಮುಂಡಿ ಬೆಟ್ಟದಲ್ಲಿ ಸರ್ಕಾರದಿಂದ ಆಹ್ವಾನಿತರಾಗಿರುವ ಬಾನು ಮುಷ್ತಾಕ್ ಅವರು ಸೋಮವಾರ ಶುಭ ವೃಶ್ಚಿಕ ಲಗ್ನದಲ್ಲಿ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ಮುಂದೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ, ಅಗ್ರ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನವರಾತ್ರಿಯ ಮೊದಲ ಬಣ್ಣವಾದ ಹಳದಿಯ ರೇಷ್ಮೆ ಸೀರೆಯುಟ್ಟು, ಹಸಿರು ಬಣ್ಣದ ರವಿಕೆ ತೊಟ್ಟು, ಮೈಸೂರು ಮಲ್ಲಿಗೆ ಮುಡಿದು ಮಂದಹಾಸದಿಂದಲೇ ವೇದಿಕೆ ಏರಿದ ಬಾನು ಮುಷ್ತಾಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರ ಸಮ್ಮುಖದಲ್ಲಿ ಬೆಳ್ಳಿಯ ಪಲ್ಲಕ್ಕಿಯ ಸಿಂಹಾಸನದಲ್ಲಿ ಅಲಕೃಂತಗೊಂಡ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿದರು.

ಈ ವೇಳೆ ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದವರಿಂದ ಬಾನು ಮುಷ್ತಾಕ್, ಸಿದ್ದರಾಮಯ್ಯ ಪರ ಜಯಘೋಷ ಮೊಳಗಿತು. ಅಲ್ಲದೆ ಭಾಷಣಕಾರರು ಭಾಷಣದ ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಪರ ಘೋಷಣೆ ಹಾಕುವ ಮೂಲಕ ನೆರೆದಿದ್ದವರನ್ನು ಉರಿದುಂಬಿಸಿದರು.

ವೇದಿಕೆಯಲ್ಲಿ ಬಾನು ಮುಷ್ತಾಕ್ ಅವರಿಗೆ ಮೈಸೂರು ಪೇಟ, ಶಾಲು ಹೊದಿಸಿ, ಅಂಬಾರಿ ಹೊತ್ತ ಮರದ ಆನೆಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಮುಖ್ಯಮಂತ್ರಿ ಸೇರಿದಂತೆ ಇನ್ನಿತರ ಗಣ್ಯರಿಗೆ ಭುವನೇಶ್ವರಿ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ಕೊಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪೊಲೀಸ್ ಬೆಂಗಾವಲು ಪಡೆ ಜತೆಯಲ್ಲಿಯೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಬಾನು ಮುಷ್ತಾಕ್ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಮಂಗಳವಾದ್ಯ, ಚಂಡೆ, ಡೋಲು, ವೀರಗಾಸೆ ಕುಣಿತ, ಪಟದ ಕುಣಿತ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಬರಮಾಡಿಕೊಳ್ಳಲಾಯಿತು. ಮುಖ್ಯ ದ್ವಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಛತ್ರಿ, ಛಾಮರ, ಬಿರುದಾವಳಿಯಿಂದ ಉದ್ಘಾಟಕರು, ಮುಖ್ಯಮಂತ್ರಿ, ಮಂತ್ರಿಮಂಡಲ, ಜನಪ್ರತಿನಿಧಿಗಳನ್ನು ಸ್ವಾಗತಿಸಿದರು.

ದೇಗುಲದ ದ್ವಾರದಲ್ಲಿಯೇ ಇರುವ ವಿನಾಯಕ ವಿಗ್ರಹಕ್ಕೆ ನಮಿಸಿದ ಗಣ್ಯರು, ಮಂಗಳಾರತಿ, ತೀರ್ಥ ಸ್ವೀಕರಿಸಿದರು. ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಭಕ್ತಪೂರ್ವಕವಾಗಿಯೇ ದೇವರಿಗೆ ಕೈ ಮುಗಿದು ನಮಿಸಿದ ಬಾನು ಮುಷ್ತಾಕ್ ಅವರಿಗೆ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು, ಸೀರೆ, ಹೂ, ಮಡಿಲಕ್ಕಿ, ಫಲತಾಂಬೂಲ, ಪ್ರಸಾದ ನೀಡಿ ಸತ್ಕರಿಸಿದರು. ದೇವಸ್ಥಾನ ಪ್ರದಕ್ಷಿಣೆ ಮೂಲಕ ಹೊರಬಂದು ನಮಿಸಿದ ಬಳಿಕ ದೇವಸ್ಥಾನದ ಗರುಡಸ್ತಂಭದ ಮುಂದಿರುವ ದೇವಿಯ ಪಾದುಕೆಯನ್ನು ಭಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಭಕ್ತಿಯಿಂದ ಮುಟ್ಟಿ ನಮಿಸಿದರು.