ಜಿಲ್ಲೆ

ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ: ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್​! Banu Mushtaq

Banu Mushtaq : ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್​ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್​ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿಲುವಿನ ಪರ ಹೈಕೋರ್ಟ್​ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ.

ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ, ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ಇಂದು (ಸೆ.19) ವಜಾಗೊಳಿಸಿದೆ. ಈ ಮೂಲಕ ದಸರಾ ಉದ್ಘಾಟಿಸಲು ಬಾನು ಮುಷ್ತಾಕ್​ ಅವರಿಗಿದ್ದ ಅಡೆತಡೆ ನಿವಾರಣೆಯಾದಂತಿದೆ.

ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ 15ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಜಾಗೊಳಿಸಿದೆ. ಹೈಕೋರ್ಟ್ ಆದೇಶದ ವಿರುದ್ಧ ಎಚ್.ಎಸ್. ಗೌರವ್ ಎಂಬುವರು ದೇಶದ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಸಮಾನತೆ, ಭ್ರಾತೃತ್ವ ಮತ್ತು ಜಾತ್ಯತೀತತೆಯ ಆದರ್ಶಗಳನ್ನು ಒಳಗೊಂಡಿರುವ ಸಂವಿಧಾನದ ಪೀಠಿಕೆಯನ್ನು ನೀವು ಓದಿದ್ದೀರಾ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಅರ್ಜಿದಾರರಾದ ಎಚ್.ಎಸ್. ಗೌರವ್ ಅವರನ್ನು ಕೇಳಿದರು. ಅಲ್ಲದೆ, ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ನಡೆಸುತ್ತದೆ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದರು.

ಹೈಕೋರ್ಟ್​ ಆದೇಶ ಏನಿತ್ತು?

ಬೂಕರ್​ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್‌ ಅವರು ಕನ್ನಡಾಂಬೆ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರವನ್ನು ವಾಪಸ್‌ ಪಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಐಎಲ್​(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅನ್ನು ಕಳೆದ ಸೋಮವಾರ (ಸೆ.15) ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿತು. ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ ತೀರ್ಪು ನೀಡಿತು. ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರವಲ್ಲದೆ ಟಿ. ಗಿರೀಶ್, ಎಚ್​.ಎಸ್.ಗೌರವ್ ಎಂಬವರೂ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿತು.