ಜಿಲ್ಲೆ

ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಮಾಜಿಕ ಕಾರ್ಯಕರ್ತನ ಮೃತದೇಹ ಪತ್ತೆ


ಬಂಟ್ವಾಳ(ದ.ಕ.): ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಸಾಮಂತ್(32) ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.


ವಾಮದಪದವಿನ ತಿಮರಡ್ಕ ಎಂಬಲ್ಲಿಯ ಅವರ ಮನೆ ಬಳಿಯ ಗುಡ್ಡದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿವಿಧ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಭ ಸಾಮಂತ್ ಅವರ ಸಾವು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತೀಚೆಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಯುವಕನಿಂದ ಹಣ ಪಡೆದು ವಂಚಿಸಿದ್ದರು ಎನ್ನುವ ಆರೋಪದಡಿ ಪದ್ಮನಾಭ ಸಾಮಂತ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಅವರು ಠಾಣೆಗೂ ಹಾಜರಾಗದೆ, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ.


ಪದ್ಮನಾಭ ಸಾಮಂತ್ ಬಂಟ್ವಾಳದ ಅನೇಕ ಹಗರಣ, ಮಾಫಿಯಾಗಳನ್ನು ಬಯಲಿಗೆಳೆದು ನಿರ್ಭೀತವಾಗಿ ಸಾಮಾಜಿಕ ಜಾಲತಾಣದಲ್ಲಿ ಭಿತ್ತರಿಸುತ್ತಿದ್ದರು. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಅನೇಕ ವಿರೋಧಿಗಳನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಪದ್ಮನಾಭ ಸಾಮಂತ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.