ಜಿಲ್ಲೆ

ಬಂಟ್ವಾಳ ಮರಕ್ಕೆ ಬೈಕ್ ಡಿಕ್ಕಿಯಾಗಿ ಕಲಾವಿದ ಮೃತ್ಯು


ಬಂಟ್ವಾಳ: ವಗ್ಗ ಸಮೀಪದ ಮರಾಯಿದೊಟ್ಟು ಕ್ರಾಸ್‌ನ ಕೊಡ್ಯಮಲೆ ಎಂಬಲ್ಲಿ ಭಾನುವಾರ ಮುಂಜಾನೆ ಮರಕ್ಕೆ ಬೈಕ್ ಡಿಕ್ಕಿಯಾಗಿ ಕೊಡ್ಯಮಲೆ ನಿವಾಸಿ ಗೌತಮ್(27) ಎಂಬುವರು ಮೃತಪಟ್ಟಿದ್ದಾರೆ.
ಬೆಳುವಾಯಿಯಲ್ಲಿ ಕದಂಬ ನಾಟಕದಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ಮನೆ ಸಮೀಪವೇ ದುರಂತ ಸಂಭವಿಸಿದೆ. ಸರಪಾಡಿ ನಿವಾಸಿ ಪ್ರವೀಣ್ ಕುಮಾರ್ ಎಂಬುವರು ಭಾನುವಾರ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗೌತಮ್ ಅವರನ್ನು ಕಂಡು, ಆಂಬುಲೆನ್ಸ್ ಮೂಲಕ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದದ್ದಾಗಿ ವೈದ್ಯರು ತಿಳಿಸಿದರು. ಬಿ.ಸಿ.ರೋಡ್‌ನ ಖಾಸಗಿ ಸಂಸ್ಥೆಯಲ್ಲಿ ಅಕೌಂಟಿಂಗ್ ವಿಭಾಗದಲ್ಲಿ ನೌಕರನಾಗಿದ್ದ ಗೌತಮ್, ಹವ್ಯಾಸಿ ನಾಟಕ ಕಲಾವಿದರೂ ಆಗಿದ್ದರು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.