ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿ ಮತ್ತು ಸಮಬಲ ಹೊಂದಿದ್ದರೂ ಎಸ್‌ಡಿಪಿಐ ಕೃಪೆಯಿಂದಾಗಿ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್‌ನ ಹಿರಿಯ ಸದಸ್ಯ ವಾಸು ಪೂಜಾರಿ ಅಧ್ಯಕ್ಷರಾಗಿ ಹಾಗೂ ಎಸ್‌ಡಿಪಿಐನ ಮೂನೀಶ್ ಆಲಿ ಉಪಾಧ್ಯಕ್ಷರಾಗಿ ಇಂದು ಆಯ್ಕೆಗೊಂಡರು.
ಓರ್ವ ಸದಸ್ಯನ ರಾಜಿನಾಮೆಯಿಂದ ಬಂಟ್ವಾಳ ಪುರಸಭೆಯಲ್ಲಿ ಒಟ್ಟು ಸದಸ್ಯ ಬಲ 26 ಆಗಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸದಸ್ಯ ಬಲವನ್ನು ಹೊಂದಿದ್ದರೆ ಎಸ್‌ಡಿಪಿಐ 4 ಸದಸ್ಯರನ್ನು ಹೊಂದಿದೆ. ಬಿಜೆಪಿಗೆ ಸಂಸದ ಹಾಗೂ ಶಾಸಕರ ಮತವಿದ್ದರೂ ಎಸ್‌ಡಿಪಿಐ ಕಾಂಗ್ರೆಸ್ಸನ್ನು ಬೆಂಬಲಿಸಿದ ಪರಿಣಾಮ ಬಹುಮತವಿದ್ದ ಬಿಜೆಪಿಗೆ ಸೋಲಾಗಿ ಕಾಂಗ್ರೆಸ್-ಎಸ್‌ಡಿಪಿಐ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ಹಂಚಿಕೊಂಡಿವೆ.
ಗುರುವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ, ಎಸ್.ಡಿ.ಪಿ.ಐ.ನ ಇದ್ರೀಸ್ ಹಾಗೂ ಬಿಜೆಪಿಯ ಎ.ಗೋವಿಂದ ಪ್ರಭು ಸ್ಪರ್ಧೆಗಿಳಿದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾದು ನೋಡುವ ತಂತ್ರ ಅನುಸರಿಸಿತು. ಎಸ್.ಡಿ.ಪಿ.ಐ. ಮೂನೀಶ್ ಆಲಿ ಮತ್ತು ಬಿಜೆಪಿ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿತು. ನಾಮಪತ್ರ ಹಿಂಪಡೆಯುವ ವೇಳೆ ಎಸ್.ಡಿ.ಪಿ.ಐ.ನ ಇದ್ರೀಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದಿಂದ ಹಿಂದಕ್ಕೆ ಸರಿದರು. ಈ ವೇಳೆ ಕಾಂಗ್ರೆಸ್‌ನ ಅಧ್ಯಕ್ಷ ಅಭ್ಯರ್ಥಿ, ಎಸ್.ಡಿ.ಪಿ.ಐ.ನ ಉಪಾಧ್ಯಕ್ಷ ಅಭ್ಯರ್ಥಿ ಹಾಗೂ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಅಂತಿಮ ಕಣದಲ್ಲಿ ಉಳಿದರು. ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಎಸ್.ಡಿ.ಪಿ.ಐ ಸದಸ್ಯರು, ಎಸ್.ಡಿ.ಪಿ.ಐ.ಅಭ್ಯರ್ಥಿಗೆ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸುವುದರ ಮೂಲಕ ಹೊಂದಾಣಿಕೆಯಿಂದ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಡಿ.ಅರ್ಚನಾ ಭಟ್ ಕಾರ್ಯನಿರ್ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಹಾಗೂ ಸಿಬ್ಬಂದಿ ಸಹಕರಿಸಿದರು.
ಕಳೆದ ಬಾರಿ ಕಾಂಗ್ರೆಸ್‌ನ ಮಹಮ್ಮದ್ ಶರೀಫ್ ಮತ್ತು ಜೆಸಿಂತಾ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆ ಸಂದರ್ಭ ಎಸ್.ಡಿ.ಪಿ.ಐ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಆ ಸಂದರ್ಭ ಕಾಂಗ್ರೆಸ್ ಎಸ್.ಡಿ.ಪಿ.ಐ. ಜತೆ ತಾನು ಹೊಂದಾಣಿಕೆ ಮಾಡಿಕೊಂಡಿಲ್ಲ, ಅವರೇ ನಮ್ಮನ್ನು ಬೆಂಬಲಿಸಿದರು ಎಂದು ಹೇಳಿತ್ತು. ಆಗ ಎಸ್.ಡಿ.ಪಿ.ಐ. ಹೇಗೆ ನಿರ್ಣಾಯಕವಾಗಿತ್ತೋ ಈ ಬಾರಿಯೂ ಅದೇ ಪುನರಾವರ್ತನೆ ಆಯಿತು. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಸ್.ಡಿ.ಪಿ.ಐ. ಅಭ್ಯರ್ಥಿಗೆ ಮತ ಹಾಕುವ ಮೂಲಕ ಆ ಪಕ್ಷಕ್ಕೆ ಬೆಂಬಲ ನೀಡಿದಂತಾಗಿದೆ.
ಕಾಂಗ್ರೆಸ್ ಮತ್ತು ಎಸ್‌ಡಿಪಿಐ.ಹೊಂದಾಣಿಕೆಯಿಂದ ಪುರಸಭೆಯ ಅಧಿಕಾರ ಪಡೆದುಕೊಂಡಿದೆ, ಇದರಿಂದ ಜನತೆಗೆ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ ಎಂದು ಶಾಸಕ ರಾಜೇಶ್ ನಾಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಡಿಪಿಐ ಯಾವ ಪಕ್ಷದ ಬಿ.ಟೀಮ್ ಎಂಬುದು ಜನತೆಗೆ ಸ್ಪಷ್ಟವಾಗಿದೆ. ಬಿಜೆಪಿ ಅತ್ಯಂತ ಹೆಚ್ಚು ಮತಗಳನ್ನು ಪಡೆದರು ಕೂಡ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಪಕ್ಷದ ಹೊಂದಾಣಿಕೆಯಿಂದ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ಇದರಿಂದ ಎಸ್.ಡಿ.ಪಿ.ಐ ಯಾವ ಪಕ್ಷದ ಬಿ.ಟೀಮ್ ಎಂಬುದು ಸ್ಪಷ್ಟವಾಗಿದೆ, ಬಹಳಷ್ಟು ಸಮಯದಿಂದ ನಾವು ಮತೀಯವಾದಿಗಳೊಂದಿಗೆ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಒಳಗಿಂದ ಒಳಗೆ ಒಪ್ಪಂದ ಮಾಡಿಕೊಂಡೇ ಬರುತ್ತಿದೆ ಎಂದು ಆರೋಪಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಪಕ್ಷದ ಕ್ಷೇತ್ರ ಸಮಿತಿಯ ಚೆನ್ನಪ್ಪ ಆರ್.ಕೋಟ್ಯಾನ್ ಜತೆಗಿದ್ದರು.