ಬಂಟ್ವಾಳ ಪುರಸಭೆ. 
ಜಿಲ್ಲೆ

ಬಂಟ್ವಾಳ ಪುರಸಭೆಯಲ್ಲಿ ಸಮಬಲದ ಕದನ : ಬಿಜೆಪಿ, ಕಾಂಗ್ರೆಸ್‌ಗೆ 11 ಸ್ಥಾನಗಳು : ಅಧ್ಯಕ್ಷ-ಉಪಾಧ್ಯಕ್ಷಗಿರಿಗೆ ಎಸ್‌ಡಿಪಿಐ ನಿರ್ಣಾಯಕ?

ಸೌಮ್ಯ ಆರ್

ಬಂಟ್ವಾಳ: ಒಂದು ವರ್ಷ ಎರಡು ತಿಂಗಳ ಕಾಲ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸೊರಗಿ ಹೋಗಿದ್ದ ಬಂಟ್ವಾಳ ಪುರಸಭೆಗೆ ಕೊನೆಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಎರಡು ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಸಿದ್ಧತೆ ಆರಂಭಿಸಿವೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿಯನ್ನು ನಿಗದಿ ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು ಆಕಾಂಕ್ಷಿಗಳು ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ.

ಬಂಟ್ವಾಳ ಪುರಸಭೆ 27 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್‌ನಿಂದ 12, ಬಿಜೆಪಿ 11 ಹಾಗೂ ಹಾಗೂ ಎಸ್‌ಡಿಪಿಐಯ 4 ಸದಸ್ಯರು ಗೆಲುವು ಸಾಧಿಸಿದ್ದರು. ಪ್ರಥಮ ಅವಧಿಯಲ್ಲಿ ಎಸ್‌ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಂಡು ಮಹಮ್ಮದ್ ಶರೀಫ್ ಅಧ್ಯಕ್ಷರಾಗಿ, ಜೆಸಿಂತ ಡಿಸೋಜ ಉಪಾಧ್ಯಕ್ಷರಾಗಿದ್ದರು. ಎರಡೂವರೆ ವರ್ಷದ ಬಳಿಕ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಕಟಗೊಳ್ಳದೆ ಇದ್ದುದರಿಂದ ಆ ಬಳಿಕ ಆಡಳಿತಾಧಿಕಾರಿಯಾಗಿ ಸಹಾಯಕ ಆಯುಕ್ತರು ಕರ್ತವ್ಯ ನಿರ್ವಹಿಸಿದ್ದರು. ಎಸ್‌ಡಿಪಿಐ ಕಿಂಗ್ ಮೇಕರ್?

ಕಳೆದ ಬಾರಿ ಕಾಂಗ್ರೆಸ್‌ಗೆ ಎಸ್‌ಡಿಪಿಐ ಬೆಂಬಲ ನೀಡಿದ್ದು ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನು ಏರಿತ್ತು. ಈ ಬಾರಿಯೂ ಎಸ್‌ಡಿಪಿಐ ನಿಲುವು ನಿರ್ಣಾಯಕವಾಗಲಿದೆ. ಬಿಜೆಪಿ ಸದಸ್ಯರಿಗೆ ಶಾಸಕರು ಹಾಗೂ ಸಂಸದರ ಒಂದೊಂದು ಮತ ಚಲಾವಣೆಯಾಗಿ ಒಟ್ಟು 13 ಮತ ಸಿಗುತ್ತದೆ. ಎಸ್‌ಡಿಪಿಐ ಎರಡೂ ಪಕ್ಷವನ್ನು ಬೆಂಬಲಿಸದೆ ತಟಸ್ಥವಾಗಿ ನಿಂತರೂ ಅಥವಾ ಬಿಜೆಪಿಯನ್ನು ಬೆಂಬಲಿಸಿದರೂ ಬಿಜೆಪಿ ಅನಾಯಾಸವಾಗಿ ಅಧಿಕಾರದ ಗದ್ದುಗೆ ಏರಬಹುದು. ಕಳೆದ ಅವಧಿಯಂತೆ ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ ಒಟ್ಟು 15 ಮತ ಪಡೆದು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಒಟ್ಟಿನಲ್ಲಿ ಈ ಬಾರಿಯೂ ಎಸ್‌ಡಿಪಿಐ ನಡೆ ನಿರ್ಣಯಕವಾಗಿದ್ದು ಕುತೂಹಲ ಮೂಡಿಸಿದೆ. ಕಿಂಗ್‌ಮೇಕರ್ ಆಗಿರುವ ಎಸ್‌ಡಿಪಿಐ ಕೂಡ ಪ್ರಮುಖ ಸ್ಥಾನಕ್ಕೆ ಬೇಡಿಕೆಯಿಡುವ ಸಾಧ್ಯತೆ ಇದೆ.

ಅಂತಿಮ ಹಂತದಲ್ಲಿ ಕುದುರೆ ವ್ಯಾಪಾರ ನಡೆಯುವ ಲಕ್ಷಣಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವು ಸಮಯದ ಬಳಿಕ ಮೀಸಲಾತಿ ಪ್ರಕಟವಾದರೂ ಅಧಿಕಾರದ ಗದ್ದುಗೆಗೆ ಯಾರು ಏರುತ್ತಾರೆ, ಏನೆಲ್ಲಾ ರಣತಂತ್ರ ಹೆಣೆಯುತ್ತಾರೆ? ಎನ್ನುವುದು ಸದ್ಯದ ಕುತೂಹಲ.

ಕೈ ಸದಸ್ಯರ ರಾಜಿನಾಮೆ ತಂದ ಇಕ್ಕಟ್ಟು

12 ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿದ್ದರೂ ಕಳೆದ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆಗೊಂಡು ತನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಒಂದು ಸ್ಥಾನವನ್ನು ಕಳಕೊಂಡು ಎರಡೂ ಪಕ್ಷಗಳು ತಲಾ 11 ಸ್ಥಾನಗಳೊಂದಿಗೆ ಸಮಬಲ ಹೊಂದಿದೆ.