ಜಿಲ್ಲೆ

ಚುನಾವಣೆ ಮುಗಿದು ಆಯ್ತು ವರ್ಷ, ಇನ್ನೂ ಆಗದ ಆಡಳಿತ ಹಸ್ತಾಂತರ

Dakshina Kannada

ಬಂಟ್ವಾಳ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತ ಗ್ರಾಮೀಣ ಅಭಿವೃದ್ಧಿ ನಿಯಮಿತದ (ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್) ಆಡಳಿತ ಮಂಡಳಿಗೆ ಚುನಾವಣೆ ನಡೆದು ಜ.25ಕ್ಕೆ ವರ್ಷ ಸಂದಿದೆ. ಆದರೆ ಚುನಾಯಿತ ಪ್ರತಿನಿಧಿಗಳ ಕೈಗೆ ಇನ್ನೂ ಆಡಳಿತ ಚುಕ್ಕಾಣಿ ಸಿಕ್ಕಿಲ್ಲ.

2020ರ ಜ.25ರಂದು ಬ್ಯಾಂಕಿನ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿ ಬೆಂಬಲಿತರು 7 ಸ್ಥಾನ ಪಡೆದು ಕಾಂಗ್ರೆಸ್ ಬೆಂಬಲಿತರು 5 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಬಂಟ್ವಾಳ ಭೂ ಬ್ಯಾಂಕ್ ಅಸ್ತಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಕಾಂಗ್ರೆಸ್ ಬೆಂಬಲಿತರೇ ಇಲ್ಲಿ ಅಧಿಕಾರ ಚಲಾಯಿಸುತ್ತಿದ್ದರು. ಆದರೆ 40 ವರ್ಷದ ಬಳಿಕ ಮೊದಲ ಬಾರಿಗೆ ಬಿಜೆಪಿ ಬೆಂಬಲಿತರು ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವವರಿದ್ದರು. ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಎರಡು ದಿನಗಳಿರುವಾಗಲೇ ಹೈಕೋರ್ಟ್‌ನಿಂದ ತಡೆಯಾಜ್ಞೆ ಬಂದ ಹಿನ್ನೆಲೆ ಬ್ಯಾಂಕ್‌ಗೆ ಚುನಾಯಿತ ಸದಸ್ಯರ ಆಡಳಿತ ಮಂಡಳಿ ಇನ್ನು ಕೂಡ ಅಸ್ತಿತ್ವಕ್ಕೆ ಬಂದಿಲ್ಲ. ಬ್ಯಾಂಕ್‌ನ ಅನರ್ಹ, ಮೃತಪಟ್ಟ ಸದಸ್ಯರ ಹೆಸರಿನಲ್ಲಿ ಮತ ಚಲಾವಣೆಯಾಗಿದ್ದು, ಇಡೀ ಚುನಾವಣೆಯಲ್ಲಿ ಅಕ್ರಮವಾಗಿ ನಡೆದಿದೆ ಎಂದು ಆರೋಪಿಸಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಜೈನ್ ನ್ಯಾಯಾಲಯದ ಮೋರೆ ಹೋಗಿದ್ದ ಹಿನ್ನೆಲೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಸದ್ಯ ವಿವಾದ ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಈ ದಾವೆಯ ತೀರ್ಪು ಹೊರಬೀಳಲು ಇನ್ನೂ ಕನಿಷ್ಠ ಒಂದೆರಡು ತಿಂಗಳು ಬೇಕಾಗಬಹುದು, ಸದ್ಯ ಮಂಗಳೂರು ಸಹಕಾರ ಸಂಘಗಳ ಇಲಾಖೆ ಉಪನಿಬಂಧಕರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರೈತರಿಗೆ ಸಾಲ ವಿತರಣೆ: ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದಿದ್ದರೂ ಬ್ಯಾಂಕ್‌ನ ಸದಸ್ಯ ರೈತರಿಗೆ ಸಾಲ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಹಕಾರ ಸಂಘಗಳ ಉಪನಿಬಂಧಕರು, ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕರು ಹಾಗೂ ಬಂಟ್ವಾಳ ಭೂಬ್ಯಾಂಕ್ ಶಾಖೆಯ ಕಾರ್ಯದರ್ಶಿಯನ್ನೊಳಗೊಂಡ ಸಮಿತಿ, ಸದಸ್ಯ ರೈತರ ಸಾಲದ ಅರ್ಜಿ ಪರಿಶೀಲಿಸಿ ಮಂಜೂರಾತಿ ನೀಡುತ್ತಿದೆ. ನಬಾರ್ಡ್ ಯೋಜನೆಯಲ್ಲಿ ಈಗಾಗಲೇ ಸುಮಾರು 1 ಕೋಟಿ ರೂ. ಸಾಲ ವಿತರಿಸಲಾಗಿದೆ.

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಆದೇಶಕ್ಕಾಗಿ ಕಾಯುತ್ತಿದ್ದೇವೆ. ನ್ಯಾಯಾಲಯ ಶೀಘ್ರ ಆದೇಶ ಮಾಡಿದ್ದಲ್ಲಿ ಸಾರ್ವಜನಿಕರು ಹಾಗೂ ಕೃಷಿಕರಿಗೆ ಅನುಕೂಲವಾಗಲಿದೆ.

- ಅರುಣ್ ರೋಷನ್ ಡಿಸೋಜ, ಭೂಅಭಿವೃದ್ಧಿ ಬ್ಯಾಂಕ್, ಬಂಟ್ವಾಳ ನಿರ್ದೇಶಕ