ಬಂಟ್ವಾಳ: ಶಿಕ್ಷಣದಿಂದ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ. ಮುಂಬೈ ಬಂಟರ ಸಂಘ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗಿ ದತ್ತು ಪಡೆಯುವುದು, ಬಡ್ಡಿ ರಹಿತ ಸಾಲ, ಶುಲ್ಕ ಪಾವತಿ, ಶಿಕ್ಷಣ ಸಂಸ್ಥೆ ನಿರ್ಮಾಣ ಸಹಿತ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿದೆ. ಅದೇ ಮಾದರಿ ಬಂಟ್ವಾಳ ಬಂಟರ ಸಂಘವೂ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮುಂಬೈ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಎಂದರು.
ಬಂಟರ ಸಂಘ ಬಂಟವಾಳ ಮತ್ತು ಮುಂಬೈಯ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆ ಅಧ್ಯಕ್ಷ ಶಶಿಕರಣ್ ಶೆಟ್ಟಿ ಸಹಯೋಗದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ 4ನೇ ವರ್ಷದ ಬಂಟ್ವಾಳ ತಾಲೂಕಿನ ಸರ್ವ ಸಮಾಜದ 1,750 ವಿದ್ಯಾರ್ಥಿಗಳಿಗೆ 52 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಭಾನುವಾರ ಬ್ರಹ್ಮರಕೂಟ್ಲವಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಅಭಿನಂದಿಸಲಾಯಿತು. ಬಂಟರ ಸಂಘದ ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆ ಹಿರಿಯ ಪ್ರಧಾನ ವ್ಯವಸ್ಥಾಪಕ(ಸಿಎಸ್‌ಆರ್) ಡಾ.ನೀಲ್‌ರತನ್ ಶೆಂಡೆ ಮಾತನಾಡಿದರು. ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಜತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ರಮಾ ಎಸ್.ಭಂಡಾರಿ, ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ, ಕಾರ್ಯಕ್ರಮ ಸಂಚಾಲಕ ಎಚ್.ಸಂಕಪ್ಪ ಶೆಟ್ಟಿ, ಬಂಟರ ಸಂಘದ ವಿವಿಧ ವಲಯಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿದರು. ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕೊಡಾಜೆ ನಿರೂಪಿಸಿದರು.