ಕರೊನಾ ಕಾರಣಕ್ಕೆ ಕಳೆಗುಂದಿದ್ದ ದಸರಾ ಹಬ್ಬ ಎಂದಿನಂತೆ ಕಳೆಗಟ್ಟಿದ್ದು, ವಿವಿಧೆಡೆ ಸಂಭ್ರಮ ಮನೆಮಾಡಿತ್ತು. ಮನೆಗಳ ಮುಂಭಾಗ ಮಹಿಳೆಯರು ಮುಂಜಾನೆಯೇ ಬಿಡಿಸಿದ್ದ ವರ್ಣಮಯ ರಂಗೋಲಿಗಳು ಆಕರ್ಷಿಸಿದವು. ತಳಿರು, ತೋರಣಗಳಿಂದ ಹೊರ ಮತ್ತು ದೇವರ ಕೋಣೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ವಿವಿಧ ಬಗೆಯ ಪುಷ್ಪಗಳಿಂದ ದೇವರ ಮೂರ್ತಿಗಳನ್ನು ಸಿಂಗರಿಸಿದ್ದರು. ಹೋಳಿಗೆ, ಪಾಯಸ, ಚಿತ್ರನ್ನ, ಪುಳಿಯೊಗರೆ, ವಡೆ, ಪಕೋಡಾ, ಅಪ್ಪಳ, ಸಂಡಿಗೆ, ಕೋಸುಂಬರಿ, ಪಲ್ಯ ಸೇರಿದಂತೆ ತರಹೇವಾರಿ ಖಾದ್ಯಗಳನ್ನು ಮಡಿಯಿಂದ ತಯಾರಿಸಿ ದೇವರಿಗೆ ಎಡೆ ಸಮರ್ಪಿಸಿದರು. ಪೂಜೆಯಾದ ಬಳಿಕ ಕುಟುಂಬ ಸಮೇತ ಹಬ್ಬದ ಊಟವನ್ನು ಸವಿದರು.
ಗಮನಸೆಳೆದ ಗೊಂಬೆಗಳು
ನವರಾತ್ರಿ ಮಹೋತ್ಸವದಲ್ಲಿ ಮನೆಗಳಲ್ಲಿ ಗೊಂಬೆ ಕೂರಿಸುವ ಪರಂಪರೆ ಇದೆ. ಮೈಸೂರು ಮತ್ತು ವಿಜಯನಗರ ಅರಸರ ಕಾಲದಿಂದ ಆರಂಭವಾದ ಈ ಪದ್ಧತಿ ಚಿತ್ರದುರ್ಗಕ್ಕೂ ವಿಸ್ತರಿಸಿದೆ. ಇಲ್ಲಿಯೂ ತಮ್ಮ ಶಕ್ತ್ಯಾನುಸಾರ ಪ್ರತಿ ವರ್ಷ ಹೊಸ ಗೊಂಬೆಗಳನ್ನು ಖರೀದಿಸುವ ಮೂಲಕ ಅನೇಕರು ಮನೆಗಳಲ್ಲಿ ಒಂಬತ್ತು, ಐದು, ಮೂರು ದಿನ ಪ್ರತಿಷ್ಠಾಪಿಸಿ ವಿಶೇಷವಾಗಿ ಆಚರಿಸಿದರು. ಆಕರ್ಷಕವಾಗಿ ಅಲಂಕರಿಸಿ ಹಲವರ ಗಮನ ಸೆಳೆದರು. ಮಾರನವಮಿ ಕೋಲಿಗೆ ಕೇಸರಿ ಬಣ್ಣದ ಕಾಗದಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.
ಆಕರ್ಷಿಸಿದ ವಾಹನಗಳು
ಆಯುಧ ಪೂಜೆ ಕೂಡ ಹಲವೆಡೆ ಸಡಗರದಿಂದ ನಡೆಯಿತು. ದ್ವಿಚಕ್ರ ವಾಹನ, ಕಾರು, ಆಟೊ, ಟ್ರ್ಯಾಕ್ಟರ್, ಬಸ್ಸು, ಲಾರಿ, ಸೈಕಲ್ ಮತ್ತು ಎತ್ತಿನಗಾಡಿಗಳನ್ನು ಗಾತ್ರಕ್ಕೆ ಅನುಗುಣವಾಗಿ ಹೂವಿನ ಹಾರಗಳಿಂದ ಚಿತ್ತಾಕರ್ಷಕವಾಗಿ ಸಿಂಗರಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪುಷ್ಪಾಲಂಕಾರ ಕೌಶಲ ಹೊಂದಿರುವವರ ಬಳಿಯೂ ಕೆಲವರು ವಾಹನಗಳಿಗೆ ಅಲಂಕಾರ ಮಾಡಿಸಿಕೊಂಡ ದೃಶ್ಯ ಕಂಡು ಬಂತು. ಕಚೇರಿ, ಕಾರ್ಖಾನೆ, ಗೋದಾಮು, ಅಂಗಡಿ-ಮುಂಗಟ್ಟು, ಯಂತ್ರೋಪಕರಣ, ಗ್ರಾಮೀಣ ಭಾಗಗಳ ಜಮೀನುಗಳಲ್ಲಿನ ಪಂಪ್‌ಸೆಟ್, ಕೃಷಿ ಪರಿಕರಗಳಿಗೂ ಪೂಜೆ ನೆರವೇರಿತು. ಮಂಗಳವಾರ ಕೂಡ ಹೂವಿನ ಖರೀದಿ ಭರಾಟೆ ಜೋರಾಗಿತ್ತು.
ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗದಲ್ಲಿ ಜನಪದ ಕಲೆಗಳು ವಿಶೇಷ ಸ್ಥಾನ ಪಡೆದಿವೆ. ಈ ಕಲೆಗೆ ಬಳಸುವ ಕಹಳೆ, ಡೊಳ್ಳು, ಉರುಮೆ, ತಮಟೆ, ಡ್ರಮ್‌ಸೆಟ್, ಕರಡಿ ಚಮ್ಮಳ ಸೇರಿ ಹಲವು ವಾದ್ಯಗಳನ್ನು ದೇವರ ಮುಂದಿಟ್ಟು ಪೂಜಿಸಲಾಯಿತು.
ಬನ್ನಿ ಪೂಜೆ ವಿಶೇಷ ಈ ಹಬ್ಬದಲ್ಲಿ ಒಂಬತ್ತು ದಿನ ಮಹಿಳೆಯರು ಮುಂಜಾನೆ ಬನ್ನಿ ಮಹಾಕಾಳಿ ದೇವಿ ಆರಾಧನೆಯೊಂದಿಗೆ ಇಷ್ಟಾರ್ಥ ಈಡೇರಿಕೆಗಾಗಿ ಬನ್ನಿ ಮರಗಳಿಗೆ ಪೂಜೆ ಸಲ್ಲಿಸುವ ಪ್ರತೀತಿ ಇದ್ದು, ಅದರಂತೆ ಇಲ್ಲಿಯೂ ಹಲವೆಡೆ ನಡೆಯಿತು. ವಿಜಯದಶಮಿಯಂದು ಮಾತ್ರ ಸಂಜೆ ಪೂಜಿಸಿ, ಮನೆಗಳಲ್ಲಿನ ಹಿರಿಯರು-ಕಿರಿಯರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ಅಲ್ಲದೆ, ಅಕ್ಕಪಕ್ಕದ ಮನೆಯವರನ್ನು, ಸಂಬಂಧಿಕರನ್ನು ಕರೆದು ಫಲ-ತಾಂಬೂಲ ನೀಡಿ ಶುಭಾಶಯ ಕೋರಿದರು.