ಜಿಲ್ಲೆ

ಬನ್ನೇರುಘಟ್ಟ ಉದ್ಯಾನದಲ್ಲಿ ಜನಸಾಗರ : ಹೊಸ ವರ್ಷಾಚರಣೆಯಂದು 22 ಸಾವಿರ ಪ್ರವಾಸಿಗರ ಭೇಟಿ

Bengaluru Rural

ಬೆಂಗಳೂರು: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜನಸಾಗರವೇ ಹರಿದು ಬಂದಿತ್ತು. ಜ.1ರಂದು ಸುಮಾರು 22 ಸಾವಿರ ಮಂದಿ ಭೇಟಿ ನೀಡಿದ್ದು, ಒಂದೇ ದಿನ 36 ಲಕ್ಷ ರೂ. ವರಮಾನ ದಕ್ಕಿದೆ.

ಕ್ರಿಸ್‌ಮಸ್ ದಿನದಂದು 17 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಹೊಸವರ್ಷಾಚರಣೆಯಂದು ದುಪ್ಪಟ್ಟು ಪ್ರವಾಸಿಗರ ಆಗಮನದ ನಿರೀಕ್ಷೆಯಿತ್ತು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ತಿಳಿಸಿದ್ದಾರೆ.

ಆನ್‌ಲೈನ್ ಟಿಕೆಟ್‌ಗೆ ಭರ್ಜರಿ ರೆಸ್ಪಾನ್ಸ್: ಇತ್ತೀಚೆಗೆ ಆರಂಭಿಸಲಾದ ಆನ್‌ಲೈನ್ ಟಿಕೆಟ್‌ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಭಾಗಶಃ ಪ್ರವಾಸಿಗರು ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಸಿದ್ದಾರೆ. ಇದರಿಂದ ಟಿಕೆಟ್ ಖರೀದಿಗೆ ಕೌಂಟರ್ ಬಳಿ ನೂಕುನುಗ್ಗಲಿಗೆ ಬ್ರೆಕ್ ಬಿದ್ದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃಗಾಲಯ, ಸಾರಿ ಮತ್ತು ಚಿಟ್ಟೆ ಉದ್ಯಾನ ವೀಕ್ಷಣೆಗೆ ಪ್ರವಾಸಿಗರು ಮುಗಿಬಿದ್ದರು. ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದ ದೃಶ್ಯ ಕಂಡುಬಂತು. ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇದ್ದುದರಿಂದ ಮುಂಜಾಗೃತೆಗಾಗಿ ಹೆಚ್ಚಿನ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರು, ಬೈಕ್ ಮತ್ತಿತರ ವಾಹನಗಳಿಗೆ ವಿಶಾಲವಾದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಆಯಕಟ್ಟಿನ ಜಾಗದಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿದ್ದರಿಂದ ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಟ್ಟೆ ಉದ್ಯಾನಕ್ಕೆ ಫಿದಾ: ಮೃಗಾಲಯಕ್ಕೆ ಹೊಂದಿಕೊಂಡಂತಿರುವ ಚಿಟ್ಟೆ ಉದ್ಯಾನಕ್ಕೆ ಪ್ರವಾಸಿಗರು ಮಾರುಹೋದರು. ಈ ಮೊದಲು ಮೃಗಾಲಯ ವೀಕ್ಷಣೆಗಷ್ಟೆ ಬರುತ್ತಿದ್ದ ಪ್ರವಾಸಿಗರಿಗೆ ಚಿಟ್ಟೆ ಉದ್ಯಾನ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ವಿವಿಧ ಪ್ರಭೇದದ ಬಣ್ಣಬಣ್ಣದ ಚಿಟ್ಟೆಗಳ ಹಾರಾಟ ಹೆಚ್ಚು ಆಕರ್ಷಣೀಯವಾಗಿದೆ ಎಂಬುದು ಪ್ರವಾಸಿಗರ ಅಭಿಮತ.

26 ಸಾರಿ ವಾಹನಗಳು: ವಾರಾಂತ್ಯಗಳಲ್ಲಿ ಕಂಡುಬರುವ ಜನಜಂಗುಳಿಗಿಂತ ಇಪ್ಪತ್ತು ಪಟ್ಟು ಪ್ರವಾಸಿಗರು ಹೊಸ ವರ್ಷಾಚರಣೆಯಂದು ಭೇಟಿ ನೀಡಿದ್ದರಿಂದ ಬೆಳಗ್ಗೆಯಿಂದ ಸಂಜೆವರೆಗೆ 26ಕ್ಕೂ ಹೆಚ್ಚು ಸಾರಿ ವಾಹನಗಳು ಕಾರ್ಯನಿರ್ವಹಿಸಿವೆ. ಬಿಳಿಹುಲಿ, ಸಿಂಹ ಜೋಡಿ, ಆನೆಗಳ ಹಿಂಡು, ಕರಡಿ ಚಿಂಕೆ ಮತ್ತಿತರ ಪ್ರಾಣಿಗಳ ವೀಕ್ಷಣೆಗೆ ಜನ ಮುಗಿಬಿದ್ದಿದ್ದರು. ಇಲಾಖೆ ಸಿಬ್ಬಂದಿ ಕೈಜೋಡಿಸಿದ್ದರಿಂದ ಪ್ರವಾಸಿಗರು ಯಶಸ್ವಿಯಾಗಿ ಸಾರಿ ಅನುಭವ ಪಡೆಯಲು ಸಾಧ್ಯವಾಯಿತು.

ಸಾಲುಗಟ್ಟಿದ ವಾಹನಗಳು: ಏಕಕಾಲಕ್ಕೆ ನೂರಾರು ವಾಹನಗಳು ಜೈವಿಕ ಉದ್ಯಾನ ಪ್ರವೇಶಿಸಿದ್ದರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಮನೆಗೆ ಮರಳುವ ವೇಳೆ ಪ್ರವಾಸಿಗರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಯಿತು.

ಪರಿಷ್ಕತ ಪ್ರವೇಶ ದರ ಜಾರಿ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ನಿರ್ಣಯದಂತೆ ಜ.1ರಿಂದ ಹೊಸ ಪ್ರವೇಶ ಶುಲ್ಕ ಜಾರಿಗೆ ಬಂದಿದೆ. ಮೃಗಾಲಯದ ಪ್ರವೇಶಕ್ಕೆ 100 ರೂ., ಚಿಟ್ಟೆ ಉದ್ಯಾನಕ್ಕೆ 50 ರೂ. ಹಾಗೂ ಸಾರಿಗೆ 350 ರೂ. ದರ ನಿಗದಿಪಡಿಸಲಾಗಿದೆ.

ನಿರೀಕ್ಷೆಯಂತೆಯೇ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಜೈವಿಕ ಉದ್ಯಾನದ ಅನುಭವ ಪಡೆದಿದ್ದಾರೆ. ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಹಿನ್ನೆಲೆಯಲ್ಲಿ ಎಲ್ಲ ವಿಭಾಗದಲ್ಲೂ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವನಶ್ರೀ ವಿಪಿನ್‌ಸಿಂಗ್, ಬನ್ನೇರುಘಟ್ಟ ಜೈವಿಕ ಉದ್ಯಾನ ಕಾರ್ಯನಿರ್ವಾಹಕ ನಿರ್ದೇಶಕಿ