ಜಿಲ್ಲೆ

ಬಸ್‌ನಲ್ಲಿ ಬಂದವರಿಗೆ ಉಚಿತ ಪ್ರವೇಶ

ಶಿವರಾಜ.ಎಂ

ಆನೇಕಲ್: ಪರಿಸರ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದ್ದು, ಇದರಲ್ಲಿ ಐದು ಸೋಮವಾರಗಳು ಸಾರ್ವಜನಿಕ ಸಾರಿಗೆ ಬಳಸಿ ಬನ್ನೇರುಘಟ್ಟಕ್ಕೆ ಬರುವ ಪ್ರವಾಸಿಗರಿಗೆ ಚಿಟ್ಟೆ ಪಾರ್ಕಿಗೆ ಉಚಿತವಾಗಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದ್ದಾರೆ.
ಮೇ 8ರಿಂದ ಜೂನ್ 5ರವರೆಗೆ ಈ ಉಚಿತ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಮೇ 22, ಮೇ 29 ಮತ್ತು ಜೂನ್ 5ರಂದು ಸಾರ್ವಜನಿಕ ಸಾರಿಗೆಯಲ್ಲಿ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಬಸ್ ಟಿಕೆಟ್ ಅಥವಾ ಬಸ್ ಪಾಸ್ ತೋರಿಸಿ ಪ್ರವೇಶ ಪಡೆಯಬಹುದಾಗಿದೆ. ಪ್ರತಿಯೊಂದು ಕುಟುಂಬವೂ ಕಾರುಗಳಲ್ಲಿ ಬರುವ ಬದಲಿಗೆ ಸಾರ್ವಜನಿಕ ಸಾರಿಗೆಯಲ್ಲಿ ಬಂದರೆ ಇಂಧನ ಉಳಿತಾಯ, ವಾಯು ಮಾಲಿನ್ಯ ತಡೆಯಲು ಸಾಧ್ಯ. ಹಾಗಾಗಿ ಪರಿಸರ ದಿನಾಚರಣೆ ಅಂಗವಾಗಿ ಉದ್ಯಾನದಲ್ಲಿ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರವಾಸಿಗರಿಂದ ಗಿಡ ನೆಡುವ ಕಾರ್ಯಕ್ರಮ ಪ್ರತಿದಿನ ನಡೆಸಲಾಗುತ್ತಿದೆ. ಜೀವನ ಶೈಲಿಯಲ್ಲಿ ಹಲವು ಬದಲಾವಣೆ ಮಾಡಿಕೊಳ್ಳುವುದರಿಂದ ಪರಿಸರ ಸಂರಕ್ಷಿಸಲು ಸಾಧ್ಯ. ಹಾಗಾಗಿ ಸ್ವಚ್ಛತೆ, ಕಸ ನಿರ್ವಹಣೆ ಜಾಗೃತಿ ಮೂಡಿಸಲಾಗುತ್ತಿದೆ. ಉದ್ಯಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸುವ ಪ್ರತಿಜ್ಞೆ ಮಾಡಿ ಸಹಿ ಮಾಡುವ ವ್ಯವಸ್ಥೆ ಜೈವಿಕ ಉದ್ಯಾನದ ಚಿಟ್ಟೆ ಪಾರ್ಕ್‌ನಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.