ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಮಹಾದೇವ ಟ್ರೇಡಿಂಗ್ ಕಂಪನಿಗೆ ಸೇರಿದ ಗೋದಾಮಿನಲ್ಲಿದ್ದ 3282 ಕೆಜಿ ಯಷ್ಟು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪಾಲಿಕೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಾಲಿಕೆ ವಲಯ ಕಚೇರಿ (ನಂ. 5) ಸಹಾಯಕ ಆಯುಕ್ತ ಫಕೀರಪ್ಪ ಇಂಗಳಗಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ದಾಳಿ ಕಾರ್ಯಾಚರಣೆ ನಡೆಸಲಾಯಿತು. 40 ಸಾವಿರ ರೂ. ದಂಡ ವಿಧಿಸಲಾಗಿದೆ.
ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಸಗಟು ದರದಲ್ಲಿ ಪ್ಲಾಸ್ಟಿಕ್ ಕಪ್, ಕ್ಯಾರಿ ಬ್ಯಾಗ್ಗಳನ್ನು ತಂದು ಇಲ್ಲಿಂದ ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಿಗೆ ಕಳುಹಿಸುವ ಉದ್ದೇಶದಿಂದ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿತ್ತು ಎಂದು ಪಾಲಿಕೆಯ ಪರಿಸರ ಇಂಜಿನಿಯರ್ ಟಿ.ಎನ್. ಶ್ರೀಧರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸೋಮಶೇಖರ ಹಿರೇಗೌಡರ್, ಹಿರಿಯ ಆರೋಗ್ಯ ನಿರೀಕ್ಷಕ ರಾಜು ಕುಲಗೊಂಡ, ಇತರರು ಇದ್ದರು.
ದುರ್ಗದಬೈಲ್, ಗೋಕುಲ ರಸ್ತೆ ಅಕ್ಷಯ ಪಾರ್ಕ್, ಇನ್ನಿತರ ಕಡೆ ಕಾರ್ಯಾಚರಣೆ ನಡೆಸಿ 20 ಕೆಜಿಯಷ್ಟು ಕ್ಯಾರಿ ಬ್ಯಾಗ್ ವಶಪಡಿಸಿಕೊಂಡು 1500 ರೂ. ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.