ಜಿಲ್ಲೆ

ಆ.3ರಂದು ಎಂಜಿಎಂ ಕಾಲೇಜಿನಲ್ಲಿ ಬನ್ನಂಜೆ ನಮನ

ಉಡುಪಿ: ವಿದ್ಯಾವಾಚಸ್ಪತಿ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ 90ನೇ ವರ್ಷಾಚರಣೆ ಅಂಗವಾಗಿ ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ, ಪರ್ಯಾಯ ಶ್ರೀ ಪುತ್ತಿಗೆ ಮಠ ಸಹಯೋಗದಲ್ಲಿ ಬನ್ನಂಜೆ-90 ಉಡುಪಿ ನಮನ ಕಾರ್ಯಕ್ರಮ ಆ.3ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ರವಿರಾಜ್​ ಎಚ್​ .ಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 8 ಗಂಟೆಗೆ ಬನ್ನಂಜೆಯವರ ಮೂಡುಬೆಟ್ಟಿನ ಮೂಲಮನೆಯ ಬ್ರಹ್ಮಸ್ಥಾನ ಮತ್ತು ನಾಗ ಸ್ಥಾನದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. 8:30ಕ್ಕೆ ಬನ್ನಂಜೆಯವರು ಕಲಿತ ಆದಿಉಡುಪಿ ಶಾಲೆಯಿಂದ ಎಂಜಿಎಂ ಕಾಲೇಜಿನವರಿಗೆ ಮೆರವಣಿಗೆ ನಡೆಯಲಿದ್ದು, ನಾಡೋಜ ಪ್ರೊ ಕೆ.ಪಿ. ರಾವ್​ಚಾಲನೆ ನೀಡಲಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭ

ಬೆಳಗ್ಗೆ 10 ಗಂಟೆಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಛಾಯಾಚಿತ್ರ ಹಾಗೂ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ವೈದೇಹಿ ಸಭಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದರು.

ಸಮಾರೋಪ ಸಮಾರಂಭ

ಸಾಯಂಕಾಲ 4ಗಂಟೆಗೆ ಹಿರಿಯ ಗಾಯಕ ವಿದ್ಯಾಭೂಷಣ ಅವರ ಸಭಾಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಗಂಗಾವತಿ ಪ್ರಾಣೇಶ್​ ಸಮಾರೋಪ ಭಾಷಣ ಮಾಡಲಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ. ವೆಂಕಟೇಶ್​ ಆಶಯ ಭಾಷಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಯಂಕಾಲ 5:30ಕ್ಕೆ ವಿದ್ಯಾಭೂಷಣರಿಂದ ಆಚಾರ್ಯರ ಹಾಡುಗಳ ಹಾಡು, ನಾದ ಲಹರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬನ್ನಂಜೆ ನಮನ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಣೈ, ಉಪಾಧ್ಯಕ್ಷ ರಂಗ ಪೈ, ಕೋಶಾಧಿಕಾರಿ ಸದಾಶಿವ ರಾವ್​, ಸಂಚಾಲಕ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.