ಜಿಲ್ಲೆ

ಬನ್ನಂಜೆಯವರ ವಿದ್ವತ್ತು, ಪ್ರೇರಣೆ ಸದಾ ಜಾಗೃತ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ನುಡಿನಮನ ಆಮಂತ್ರಣ ಪತ್ರಿಕೆ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೀಕಷ್ಣನ ಜನ್ಮಾಷ್ಟಮಿ ನಿಮಿತ್ತ ಉಡುಪಿಯಲ್ಲಿ ಮಂಡಲೋತ್ಸವ ನಡೆಯುವ ಸಂದರ್ಭದಲ್ಲಿಯೇ ಶ್ರೀಕೃಷ್ಣನ ಭಕ್ತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ. ಅವರ ವಿದ್ವತ್ತು, ಸ್ಫೂರ್ತಿ ಹಾಗೂ ಪ್ರೇರಣೆ ಇನ್ನೂ ಎಲ್ಲೆಡೆ ಜಾಗೃತವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಗೀತಾ ಮಂದಿರದಲ್ಲಿ ಜುಲೈ 13ರಂದು ಸಾಯಂಕಾಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಅಭಿಮಾನಿಗಳ ವತಿಯಿಂದ ಆ.3ರಂದು ಎಂಜಿಎಂ ಕಾಲೇಜಿನ ಮುದ್ದಣ ಪಂಟಪದಲ್ಲಿ ಆಯೋಜಿಸಿರುವ ಬನ್ನಂಜೆ-90 ಉಡುಪಿ ನಮನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವತ್​ಪೂರ್ಣ ಪ್ರವಚನದಿಂದಲೇ ಖ್ಯಾತರಾಗಿದ್ದ ಪದ್ಮಶ್ರೀ ಬನ್ನಂಜೆಯವರು ನಮ್ಮೊಂದಿಗೆ ಇರುತ್ತಿದ್ದರೆ 90 ವರ್ಷವಾಗಿರುತ್ತಿತ್ತು. ಅವರ ಅಭಿಮಾನಿಗಳೆಲ್ಲ ಸೇರಿ ಸಂಸ್ಮರಣೆ ಮಾಡುತ್ತಿರುವುದು ಅನುಕರಣೀಯ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲಿ ಎಂದು ಸುಗುಣೇಂದ್ರ ಶ್ರೀ ಶುಭ ಹಾರೈಸಿದರು.

ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬನ್ನಂಜೆ ಉಡುಪಿ ನಮನ ಕಾರ್ಯಕ್ರಮದ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಸ್ಟ್ರೊ ಮೋಹನ, ಸಂಚಾಲಕರಾದ ರವಿರಾಜ ಎಚ್​.ಪಿ., ಜನಾರ್ದನ ಕೊಡವೂರು, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್​, ಉಪಾಧ್ಯಕ್ಷರಾದ ಪ್ರೊಫೆಸರ್​ ಶಂಕರ, ನಾರಾಯಣ ಮಡಿ, ಡಾ. ಭಾರ್ಗವಿ ಐತಾಳ, ಡಾ. ರಾಮಚಂದ್ರ ಐತಾಳ, ಕಾರ್ಯದರ್ಶಿಗಳಾದ ರಾಜೇಶ ಭಟ್​ ಪಣಿಯಾಡಿ, ಪೂರ್ಣಿಮಾ ಜನಾರ್ದನ, ಪ್ರಭಾಕರ ತುಮರಿ, ಸಮಿತಿ ಸದಸ್ಯರಾದ ರಾಘವೇಂದ್ರ ಪ್ರಭು ಕರ್ವಾಲು, ಸುಶಾಂತ ಕೆರೆಮಠ, ಮಹೇಶ ಠಾಕೂರ್​, ಸತೀಶ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಜಯಶ್ರೀ ಉಡುಪಿ, ಸುಮಿತ್ರಾ ಕೆರೆಮಠ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಡಾ.ಗಣೇಶಪ್ರಸಾದ್​ ನಾಯಕ, ರಾಮಾಂಜಿ, ಹಿರಿಯರಾದ ಪ್ರಭಾವತಿ ವಿ. ಶೆಣೈ, ಭಾಸ್ಕರ ರಾವ್​ ಇತರರು ಉಪಸ್ಥಿತರಿದ್ದರು.