ಪುತ್ತೂರು: ಗಟ್ಟಿಯಾಗಿ, ತೂಕವಾಗಿ ಆತ್ಮವಿಶ್ವಾಸದಿಂದ ವಿಚಾರಗಳನ್ನು ಪ್ರತಿಪಾದಿಸಿದ ಬನ್ನಂಜೆ ವ್ಯಾಪಕ ವಿಚಾರಧಾರೆ, ಅಗಾಧ ಸಾರಸ್ವತ ಸಂಪತ್ತು, ಛಂದೋ ವಿರಾಟ ಪ್ರತಿಭೆಯಾಗಿದ್ದರು. ಭಾರತದಲ್ಲೇ ಉಪನಿಷತ್ತುಗಳ ಮೇಲೆ ಸ್ವತಂತ್ರವಾದ ವ್ಯಾಖ್ಯಾನವನ್ನು ಸಂಸ್ಕೃತದಲ್ಲಿ ಬರೆದವರಾಗಿದ್ದಾರೆ ಎಂದು ಬೆಂಗಳೂರು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.
ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಬೆಂಗಳೂರು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ಪುತ್ತೂರು ಬಹುವಚನಂ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಹುಶ್ರುತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ‘ವಿಶ್ವ ಬನ್ನಂಜೆ ೯೦ರ ಪುತ್ತೂರು ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿ.ಎಲ್.ಸಮೂಹ ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬನ್ನಂಜೆ ೯೦ರ ನಮನ ಪುತ್ತೂರು ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಮಾಧವ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದರು. ಪುತ್ತೂರು ಬಹುವಚನಂನ ಡಾ.ಶ್ರೀಶ ಕುಮಾರ್ ಸ್ವಾಗತಿಸಿದರು. ಬಹುವಚನಂನ ರಂಗಕರ್ಮಿ ಐ.ಕೆ.ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.
ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ‘ಬನ್ನಂಜೆ ಸ್ಮರಣೆ’, ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ‘ಗುರು ಬನ್ನಂಜೆ’, ಭಾರತಿ ಕಲ್ಲೂರಾಯ ‘ವಿಶ್ವತೋಮುಖ ಬನ್ನಂಜೆ’ ಎಂಬ ವಿಚಾರವನ್ನು ಗೋಷ್ಠಿಯಲ್ಲಿ ಮಂಡಿಸಿದರು. ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಬನ್ನಂಜೆ ಹಾಡುಗಬ್ಬ ಪ್ರಸ್ತುತ ಪಡಿಸಿದರು. ಸಿನಿಮಾ ನಿರ್ದೇಶಕ ಸುಚೇಂದ್ರ ಪ್ರಸಾದ್ ಮತ್ತು ತಂಡ ಡಾ.ವೀಣಾ ಬನ್ನಂಜೆ ವಿರಚಿತ ‘ನನ್ನ ಪಿತಾಮಹ’ ನಾಟಕ ಪ್ರದರ್ಶಿಸಿದರು.