ಮಂಡ್ಯ: ರಾಜ್ಯ ಸರ್ಕಾರದ ಚಾಲೆಂಜಿಂಗ್ ಫಂಡ್ ಅಭಿಯಾನದಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಶ್ರಮಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಎಲ್ಲ ಬ್ಯಾಂಕಿನ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಬ್ಯಾಂಕ್ ಆಫ್ ಬರೋಡ ಆರ್‌ಸೆಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿಸಿಸಿ- ಡಿಎಲ್ಆರ್‌ಸಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2025-26ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ.107ರಷ್ಟು ಪ್ರಗತಿ ಸಾಧಿಸಿರುವುದು ಉತ್ತಮವಾಗಿದೆ. ಮುಂದಿನ ದಿನದಲ್ಲಿ ಇದೆ ರೀತಿ ಪ್ರಗತಿ ಸಾಧಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಮಾತನಾಡಿ, 2025-26 ನೇ ಸಾಲಿನಲ್ಲಿ ಆದ್ಯತಾ ವಲಯದಲ್ಲಿ ಎಲ್ಲ ಬ್ಯಾಂಕ್‌ಗಳ ಪ್ರಗತಿ ವಿವರಿಸಿದರು. ಜಿಲ್ಲೆಯ ಮೊದಲ ತ್ರೈಮಾಸಿಕದಲ್ಲಿ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ 3,346 ಕೋಟಿ ರೂ ಅಂದರೆ ಶೇ.107ರಷ್ಟು ಪ್ರಗತಿ ಸಾಧಿಸಲಾಗಿದೆ. ಕೃಷಿ ವಲಯದಲ್ಲಿ 2,464 ಕೋಟಿ ರೂ, ಕೈಗಾರಿಕಾ ವಲಯದಲ್ಲಿ 652 ಕೋಟಿ ರೂ ಹಾಗೂ ಇತರೆ ಸೇವಾ ವಲಯದಲ್ಲಿ 230 ಕೋಟಿ ರೂ ಸಾಲವನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆರ್‌ಬಿಐ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ವ್ಯವಸ್ಥಾಪಕಿ ಹರ್ಷಿತಾ ಸೇರಿದಂತೆ ಎಲ್ಲ ಬ್ಯಾಂಕಿನ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಹಿಸಿದ್ದರು.