ಜಿಲ್ಲೆ

ರೈತರೊಪ್ಪಿದರೆ ಮಾತ್ರ ಹಣ ಕಟಾವಾಗಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟ ಸೂಚನೆ

ಮಂಡ್ಯ: ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡುವ ಪರಿಹಾರದ ಹಣವನ್ನು ರೈತರು ಒಪ್ಪಿದರೆ ಮಾತ್ರ ಕಟಾವು ಮಾಡಿಕೊಳ್ಳಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟ ಸೂಚನೆ ನೀಡಿದರು.

ನಗರದ ಆರ್.ಸಿ.ಟಿ ಸಭಾಂಗಣದಲ್ಲಿ(ಬ್ಯಾಂಕ್ ಆಫ್ ಬರೋಡ) ಆಯೋಜಿಸಿದ್ದ ಜಿಲ್ಲಾಮಟ್ಟದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಬ್ಯಾಂಕ್‌ನಲ್ಲಿ ಸಾಲ ಪಡೆದು ತೀರಿಸಲು ಸಾಧ್ಯವಾಗಿರುವುದಿಲ್ಲ. ಈ ನಡುವೆ ಬೆಳೆ ನಷ್ಟ ಪರಿಹಾರಕ್ಕೆಂದು ಸರ್ಕಾರ ಅವರ ಖಾತೆಗೆ ಹಣ ಬಿಡುಗಡೆ ಮಾಡುತ್ತದೆ. ಹಾಗೆಂದು ಸಾಲದ ಹಣಕ್ಕೆ ಪರಿಹಾರದ ಮೊತ್ತವನ್ನು ಕಟಾವು ಮಾಡಿಕೊಳ್ಳಬಾರದು. ಬದಲಿಗೆ ರೈತರ ಗಮನಕ್ಕೆ ತಂದು ಅವರು ಇಚ್ಛಿಸಿದಲ್ಲಿ ಮಾತ್ರ ಕಟಾವು ಮಾಡಿಕೊಳ್ಳಬೇಕು ಎಂದರು.

ಕೆಲ ಬ್ಯಾಂಕ್‌ಗಳಲ್ಲಿ ಜನರಿಗೆ ಲೋನ್ ನೀಡುವ ಸಂಬಂಧ ಮ್ಯಾನೇಜರ್‌ಗಳು ಸಹಕರಿಸುತ್ತಿಲ್ಲ. ಜತೆಗೆ ಬಹಳ ದಿನ ಅಲೆದಾಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬ್ಯಾಂಕ್ ಅಧಿಕಾರಿಗಳು ಜನರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ ಸೂಕ್ತ ರೀತಿಯಲ್ಲಿ ವರ್ತಿಸಬೇಕು. ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಆದ್ದರಿಂದ ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ನೀಡುವ ಸರ್ಕಾರದ ಯೋಜನೆ, ಸಾಲ ಸೌಲಭ್ಯ, ಸಹಾಯಧನದ ಬಗ್ಗೆ ಮೇಳಗಳನ್ನು ಆಯೋಜಿಸುವ ಮೂಲಕ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸೂಚಿಸಿದರು.

ದೈನಂದಿನದ ವ್ಯವಹಾರದಲ್ಲಿ ಜನ ಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ, ಅಡಚಣೆಗಳು ಉಂಟಾಗದ ರೀತಿ ಸೇವೆ ನೀಡುವುದು ಪ್ರತಿಯೊಂದು ಬ್ಯಾಂಕ್‌ನ ಕರ್ತವ್ಯ. ಆರ್ಥಿಕ ಪ್ರಗತಿ ಮತ್ತು ಬೆಳವಣಿಗೆಯಲ್ಲಿ ಬ್ಯಾಂಕ್ ಪಾತ್ರ ಹಾಗೂ ಜವಾಬ್ದಾರಿ ಬಹುಮುಖ್ಯವಾಗಿದೆ. ಆದ್ದರಿಂದ ಬಹಳ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದಿಂದ ಜನರಿಗೆ ನೀಡುವ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಸರ್ಕಾರದ ಸವಲತ್ತನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಆರ್‌ಬಿಐ ಬೆಂಗಳೂರು ಶಾಖೆಯ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಇತರರಿದ್ದರು.