ಮೈಸೂರು: ಮಹಿಳೆಯರು ಸ್ವಯಂ ಉದ್ಯೋಗ ಕಂಡುಕೊಳ್ಳಲು ಬ್ಯಾಂಕ್‌ಗಳು ಸಹಕಾರಿಯಾಗಿವೆ ಎಂದು ಬ್ಯಾಂಕ್ ಆಫ್ ಇಂಡಿಯಾ ಉದಯಗಿರಿ ಶಾಖೆ ವ್ಯವಸ್ಥಾಪಕ ಎಸ್.ಮುರಳೀಧರ್ ಹೇಳಿದರು.
ವಿವಿಧ 65 ಮಹಿಳಾ ಸಂಘ-ಸಂಸ್ಥೆಗಳನ್ನೊಳಗೊಂಡ ‘ಆಶ್ರಯ ಪ್ರಗತಿ ಸಂಘಗಳ ಒಕ್ಕೂಟ’ದಿಂದ ಉದಯಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸಾಲ-ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ, ಬ್ಯಾಂಕ್‌ಗಳಿಗೆ ಭೇಟಿ ನೀಡಿದರೆ ಸುಲಭವಾಗಿ ಸಾಲ ಪಡೆದು, ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದಾಗಿದೆ. ಆದರೆ, ಸಾಕಷ್ಟು ಜನರು ಮಧ್ಯವರ್ತಿಗಳ ಮೊರೆ ಹೋಗಿ ಹಣ ಕಳೆದುಕೊಳ್ಳುವುದಲ್ಲದೆ ಬ್ಯಾಂಕ್ ಸಾಲ ನೀಡುವುದಿಲ್ಲ ಎನ್ನುವ ಭಾವನೆ ತಾಳಿರುತ್ತಾರೆ. ಆದ್ದರಿಂದ ಫಲಾನುಭವಿಗಳೇ ಖುದ್ದು ಬ್ಯಾಂಕ್‌ಗೆ ಭೇಟಿ ನೀಡಬೇಕು ಎಂದು ಹೇಳಿದರು.
ಭಾರತೀಯ ಮಹಿಳಾ ಉದ್ಯಮಿಗಳು ಮತ್ತು ಟ್ರೈನರ್ ಅಸೋಸಿಯೇಷನ್ ನಿರ್ದೇಶಕಿ ದಿವ್ಯಾ ರಾಜ್‌ಕಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಆಸಕ್ತ ಮಹಿಳೆಯರಿಂದ ಅರ್ಜಿ ಸಲ್ಲಿಸುವುದಲ್ಲದೆ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಗಂಗಾ ಚಾರಿಟಬಲ್ ಟ್ರಸ್ಟ್‌ನಿಂದ ಕಳೆದ ವರ್ಷ 200ಕ್ಕೂ ಹೆಚ್ಚು ಮಹಿಳೆಯರಿಂದ ಅರ್ಜಿ ಸಲ್ಲಿಸಿ, ಅವರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ನಿರುದ್ಯೋಗ ಯುವಕ-ಯುವತಿಯರಿಗೆ ಮೀನುಗಾರಿಕೆ, ಆಹಾರ ಪದಾರ್ಥಗಳ ಪೊಟ್ಟಣ ತಯಾರಿಕೆ ಸೇರಿದಂತೆ ಹಲವು ಬಗೆಯ ಸ್ವಯಂ ಉದ್ಯೋಗಳ ತರಬೇತಿ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಖಾದಿ ಗ್ರಾಮೀಣ ಉದ್ಯೋಗ ಮಂಡಳಿಯಿಂದ ಉಚಿತ ತರಬೇತಿ ಪಡೆದ ಜಯಂತಿ, ಭವಾನಿ, ನಾಗವೇಣಿ, ಚಂದನಾ, ರಶ್ಮಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ, 20 ಶಿಬಿರಾರ್ಥಿಗಳಿಗೆ ಹೊಲಿಗೆ ಯಂತ್ರೋಪಕರಣ, ಟೂಲ್‌ಕಿಟ್ಸ್‌ಗಳನ್ನು ನೀಡಲಾಯಿತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೌರಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಆಶ್ರಯ ಪ್ರಗತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ, ಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್‌ಕಾಮಯ್ಯ, ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾಸಾಗರ ಕದಂಬ, ಸಮಾಜ ಸೇವಕಿ ಪ್ರೇಮಾಕುಮಾರಿ ವಿದ್ಯಾಸಾಗರ, ಚಾಮುಂಡೇಶ್ವರಿ ದೇವಸ್ಥಾನದ ಮಾಜಿ ಧರ್ಮದರ್ಶಿ ಸವಿತಾ ಘಾಟ್ಕರ್, ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿಕಟ್ಟೆ ಸುವರ್ಣಾ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಪ್ರೇಮಲತಾ, ಪದಾಧಿಕಾರಿಗಳಾದ ಸಬೀನಾ ತಾಜ್, ಶುಭಮಂಗಳಾ ಇತರರು ಇದ್ದರು.